ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ 1,700 ಗ್ರಾಮ ಕರಣಿಕ ಹುದ್ದೆಗಳನ್ನು ತುಂಬಲು ನಿರ್ಧರಿಸಲಾಗಿದೆ. ಆ ಮೂಲಕ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅವರು ಮಂಗಳವಾರ ಇಲ್ಲಿನ ಮಂಗಳೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದ.ಕ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಗ್ರಾಮ ಕರಣಿಕ ಹುದ್ದೆಗಳನ್ನು ಪರೀಕ್ಷೆಯ ಮೂಲಕ ಪಾರದರ್ಶಕವಾಗಿ ನೇಮಕ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ ಸಚಿವರು, ಮುಂದಿನ ಮೂರು ನಾಲ್ಕು ತಿಂಗಳುಗಳಲ್ಲಿ 250 ಭೂ ಮಾಪಕರನ್ನು ನೇಮಕ ಮಾಡಲಾಗುವುದು. ಅದೇ ರೀತಿ ಎಡಿಎಲ್‌ಆರ್ ಮತ್ತು ಬೆಂಬಲ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದರು.
ಪ್ರತೀ ತಿಂಗಳು ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ಸಾಧ್ಯವಾಗದು. ಆದರೆ ಪ್ರತೀ ತಿಂಗಳು ಜಿಲ್ಲಾಕಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಬೆಂಬಲ ಸಿಬ್ಬಂದಿ ಅವರಿಗೆ ಸಹಕಾರ ಕೊಡಬೇಕು. ಅದೇ ರೀತಿ ವಿಭಾಗ ಮಟ್ಟದಲ್ಲೂ ಪ್ರಗತಿ ಪರಿಶೀಲನಾ ಸಭೆಗಳು ನಿಯತವಾಗಿ ನಡೆಯಲಿವೆ ಎಂದರು.
ಆಗಾಗ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಮಾತೃ ಇಲಾಖೆಯಾಗಿ ಕಂದಾಯ ಇಲಾಖೆ ಜನರ ಸಂಕಷ್ಟಗಳಿಗೆ ನೆರವಾಗಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಬದಲಾಗಿ ಇಲಾಖೆಯೇ ಜನತೆಗೆ ಸಂಕಟವಾಗಕೂಡದು. ಆ ದಿಸೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.
ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಇರುವ ಕೇಸುಗಳು ಮುಂದಿನ ಮೂರು ತಿಂಗಳುಗಳಲ್ಲಿ ಇತ್ಯರ್ಥ ಆಗಬೇಕು. ಸಭೆಯಲ್ಲಿ ಚರ್ಚೆ ಆಗಿರುವ ಸಮಸ್ಯೆಗಳು ನಿಗದಿತ ಅವಧಿಯೊಳಗೆ ಪರಿಹಾರ ಕಾಣಬೇಕು. ಅಕಾರಿಗಳು ಸಮನ್ವಯತೆ ಸಾಧಿಸಿ ಕೆಲಸ ಮಾಡಿದಾಗ ಜನತೆಗೆ ಅನುಕೂಲ ಆಗುತ್ತದೆ ಎಂದು ಹೇಳಿದ ಕಂದಾಯ ಸಚಿವರು, ಗ್ರಾಮ ಕರಣಿಕರಿಗೆ ಗ್ರಾಮ ಪಂಚಾಯತುಗಳು ಸ್ಥಳಾವಕಾಶ ಕಲ್ಪಿಸಿ ಕೊಡಬೇಕು. ಆಗ ಗ್ರಾಮಾಡಳಿತಕ್ಕೆ ಅರ್ಥ ಬರುತ್ತದೆ ಮತ್ತು ಜನತೆಗೆ ಅನುಕೂಲ ಆಗುತ್ತದೆ ಎಂದರು.