ಜಿಂಕೆ, ನವಿಲು ಮಾಂಸ ಅಕ್ರಮ ಮಾರಾಟ: ಮೂವರ ಬಂಧನ

ಹೊಸ ದಿಗಂತ ವರದಿ, ಕಲಬುರಗಿ:

ಅಕ್ರಮವಾಗಿ ಜಿಂಕೆ ಮತ್ತು ರಾಷ್ಟ್ರೀಯ ಪಕ್ಷಿ ನವಿಲು ಭೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಮೂರು ಜನರನ್ನು ಬಂಧಿಸಿದ್ದಾರೆ.

ಕಲಬುರಗಿ ನಗರದ ಯಾದುಲ್ಲಾ ಕಾಲೋನಿಯ ನಜಮೋದ್ದಿನ ಎಂಬುವವರ ಮನೆಯಲ್ಲಿ ಅಕ್ರಮ ಜಿಂಕೆ ಮತ್ತು ರಾಷ್ಟ್ರೀಯ ಪಕ್ಷಿ ನವಿಲು ಮಾಂಸ ಮಾರಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಎಸ್.ರವಿಕುಮಾರ ಅವರ ಮಾರ್ಗದರ್ಶನದಲ್ಲಿ, ರೋಜಾ ಪೊಲೀಸ್ ಠಾಣೆ, ರೌಡಿ ನಿಗ್ರಹದಳ ಹಾಗೂ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಜಂಟಿ ಕಾರ್ಯಾಚರಣೆ ನಡೆಸಿ, ಸೈಯ್ಯದ ನಜಮೋದ್ದಿನ ಸೈಯ್ಯದ ನೂರುದ್ದೀನ, ಮಹ್ಮದ ಅಲ್ತಾಫ ಶೇಖ ಅಬ್ದುಲ ಅಜೀಜ್ ಹಾಗೂ ಸಮೀ ಜುನೈದಿ ಮಹ್ಮದ ಸಲೀಮೋದ್ದಿನ ಜುನೈದಿ ಎಂಬ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿ ವೇಳೆ ಒಂದು 22 ರೈಫಲ್ ಮತ್ತು ಅದಕ್ಕೆ ಸಂಬಂಧಿಸಿದ ಜೀವಂತ 28 ಗುಂಡುಗಳು, 114 ಖಾಲಿ ಕಾಡತೋಸುಗಳು
(ಎಂ.ಟಿ. ಕೇಸಸ್ ), ಒಂದು 177 ಏರಗನ್, ಜಿಂಕೆಯ ಮಾಂಸದ ತುಂಡುಗಳು, 20 ಕಾಲುಗಳು, ಒಂದು ಮೃತ ರಾಷ್ಟ್ರ ಪಕ್ಷಿ ನವಿಲು, ಕೃತ್ಯಕ್ಕೆ ಉಪಯೋಗಿಸಿದ ಒಂದು ಬುಲೋರೋ ವಾಹನ, ಮಾಂಸ ಕಡಿಯಲು ಉಪಯೋಗಿಸಿದ ಚಾಕು, ಚಾಪ, ಗರಗಸ, ಸುತಾರ, ಬತಾಯಿ, ಮಸಿಯುವ ಕಲ್ಲು, ಎರಡು ಜೊತೆ ಗಮ್ ಬೂಟುಗಳು ಮತ್ತು ಎರಡು ಮೊಬೈಲ್ ಗಳು ಹಾಗೂ ಮಾಂಸ ಮಾರಾಟದಿಂದ ಸಂಗ್ರಹಿಸಿದ ಹಣ ರೂಪಾಯಿ 17,718 ಜಪ್ತಿ ಮಾಡಲಾಗಿದೆ.

ಸಿಬ್ಬಂದಿಗಳ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!