ಮಾನಹಾನಿಕರ ಟ್ವೀಟ್‌: ಲಕ್ಷ್ಮೀ ಪುರಿಗೆ 50 ಲಕ್ಷ ರೂ.ನಷ್ಟ ಪರಿಹಾರ ನೀಡಲು ಟಿಎಂಸಿ ನಾಯಕನಿಗೆ ಹೈಕೋರ್ಟ್‌ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರ ಪತ್ನಿ, ಮಾಜಿ ರಾಜತಾಂತ್ರಿಕರಾದ ಲಕ್ಷ್ಮೀ ಪುರಿ ಅವರ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಮಾನಹಾನಿಕರ ಟ್ವೀಟ್‌ ಮಾಡಿದ್ದಕ್ಕೆ ಕ್ಷಮೆಯಾಚಿಸುವುದರ ಜೊತೆಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಟಿಎಂಸಿ ನಾಯಕ ಸಾಕೇತ್‌ ಗೋಖಲೆ ಅವರಿಗೆ ದಿಲ್ಲಿ ಹೈಕೋರ್ಟ್‌ ಸೋಮವಾರ ಸೂಚಿಸಿದೆ.

ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ವಾದ-ವಿವಾದವನ್ನು ಆಲಿಸಿದ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು, ಸಾಕೇತ್‌ ಗೋಖಲೆ ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್ ವೇದಿಕೆಗಳಲ್ಲಿ ತಮ್ಮ ಆರೋಪದ ಕುರಿತು ಹೆಚ್ಚಿನ ವಿಷಯವನ್ನು ಪ್ರಕಟಿಸಬಾರದು ಎಂದು ನಿರ್ಬಂಧ ವಿಧಿಸಿದೆ.

ಆಕ್ಷೇಪಾರ್ಹ ಟ್ವೀಟ್‌ಗಳು ಮಾನಹಾನಿಕರವಾಗಿವೆ. ಫಿರ್ಯಾದಿಯು ತನ್ನ ಖ್ಯಾತಿಗೆ ಚುತಿ ಬರುವಂತೆ ನೋವು ಅನುಭವಿಸಿದ್ದಾರೆ. ಇದು ಪರಿಹಾರವನ್ನು ಖಾತರಿಪಡಿಸುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಜಿನೀವಾದಲ್ಲಿ ಲಕ್ಷ್ಮಿಪುರಿ ಅಪಾರ್ಟ್‌ಮೆಂಟ್‌ ಹೊಂದುವುದಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರಗಳ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಗೋಖಲೆ ತನ್ನ ಹೆಸರು ಮತ್ತು ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀ 2021 ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಂಭಾನಿ ಅವರು, ಹಣಕಾಸಿನ ಅವ್ಯವಹಾರದ ಆರೋಪಗಳು ವ್ಯಕ್ತಿಯ ಪ್ರತಿಷ್ಠೆಯ ಅಡಿಪಾಯವನ್ನು ಹಾಳುಮಾಡುತ್ತದೆ. ಆಕ್ಷೇಪಾರ್ಹ ಟ್ವೀಟ್‌ಗಳಿಂದ ಫಿರ್ಯಾದಿಯ ಪ್ರತಿಷ್ಠೆಗೆ ಉಂಟಾದ ಹಾನಿಯನ್ನು ಸಂಪೂರ್ಣವಾಗಿ ಹೊರಹಾಕಲು ಸಾಧ್ಯವಿಲ್ಲ, ಆದರೆ ಬೇಷರತ್ ಕ್ಷಮೆಯಾಚನೆಯು ಅತ್ಯಗತ್ಯ ಎಂದು ಹೇಳಿದರು.

ಹೈಕೋರ್ಟ್ ಜುಲೈ 2021 ರಲ್ಲಿ ಮಧ್ಯಂತರ ಆದೇಶವನ್ನು ನೀಡಿತ್ತು. ಲಕ್ಷ್ಮೀಪುರಿ ಅಥವಾ ಅವರ ಪತಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ಹಗರಣದ ಟ್ವೀಟ್‌ಗಳನ್ನು ಪೋಸ್ಟ್ ಮಾಡದಂತೆ ಗೋಖಲೆ ಅವರನ್ನು ನಿರ್ಬಂಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!