ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಅತಿಯಾದ ಆತ್ಮವಿಶ್ವಾಸ, ದಲಿತ ಮತಗಳ ವರ್ಗಾವಣೆ, ಸಾಧನೆಗಳನ್ನು ಬಳಸಿಕೊಳ್ಳುವಲ್ಲಿನ ವೈಫಲ್ಯ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಬಳಸದಿರುವುದೇ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಲಕ್ನೋದಲ್ಲಿ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಧ್ವಜವನ್ನು ಹಾರಿಸಬೇಕಾಗಿದೆ. ರಾಜ್ಯದ 10 ಸ್ಥಾನಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆ ಮತ್ತು 2027ರ ವಿಧಾನಸಭಾ ಚುನಾವಣೆಗೆ ಎಲ್ಲರೂ ಈಗಿನಿಂದಲೇ ಸಕ್ರಿಯರಾಗಿರಬೇಕು. ಎಲ್ಲ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮೇಯರ್‌ಗಳು, ಕೌನ್ಸಿಲರ್‌ಗಳು, ಕಾರ್ಯಕರ್ತರು ಸೇರಿ ಎಲ್ಲರೂ 2027ರ ಚುನಾವಣೆಗೆ ಈಗಿನಿಂದಲೇ ತಯಾರಿ ಪ್ರಾರಂಭಿಸಬೇಕುಎಂದು ಕರೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ನಾವು ರಾಜ್ಯದಲ್ಲಿ ಪ್ರತಿಪಕ್ಷಗಳ ಮೇಲೆ ನಿರಂತರ ಒತ್ತಡವನ್ನು ಕಾಯ್ದುಕೊಂಡಿದ್ದೇವೆ. 2014, 2017, 2019 ಮತ್ತು 2022ರಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದೇವೆ. ಆದರೆ ಈ ಬಾರಿ ಮತಗಳ ಬದಲಾವಣೆ ಮತ್ತು ಅತಿಯಾದ ಆತ್ಮವಿಶ್ವಾಸ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಈ ಹಿಂದೆ ಸೋಲನ್ನು ಒಪ್ಪಿಕೊಂಡು ತಮ್ಮ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದ ಪ್ರತಿಪಕ್ಷಗಳು ಈಗ ಸಿಕ್ಕ ಯಶಸ್ಸಿನಿಂದ ಮೆರೆಯುತ್ತಿವೆ ಎಂದು ಹೇಳಿದ್ದಾರೆ.
ಬಿಜೆಪಿ ಸಂವಿಧಾನದ ಬಗ್ಗೆ ಅತ್ಯುನ್ನತ ಗೌರವ ಹೊಂದಿರುವ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮೂಲ ಪ್ರತಿಯನ್ನು ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಿದ್ದಾರೆ. ಬಿಜೆಪಿ ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಆದರೆ ಪ್ರತಿಪಕ್ಷಗಳು ವದಂತಿಗಳನ್ನು ಹರಡಿ, ಗೊಂದಲವನ್ನು ಸೃಷ್ಟಿಸಿವೆ. ಇದು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸಿತು. ನಾವು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.