ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಅದ್ರಲ್ಲೂ ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ. ಸೋಮಣ್ಣ (V Somanna) ಕ್ಷೇತ್ರಗಳಲ್ಲಿ ಸೋಲು ಕಂಡಿದ್ದು, ಈ ಸೋಲು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವಿರುದ್ಧ ಸೋತರೇ, ಇತ್ತ ವರುಣದಲ್ಲಿ ಸಿದ್ಧರಾಮಯ್ಯ ಭರ್ಜರಿ ಜಯಗಳಿಸಿದ್ದು,ಇದರಿಂದ ವಿ. ಸೋಮಣ್ಣ ಅವರಿಗೆ ಸೋಲಿನ ಅನುಭವ ಆಗಿದೆ.
ಈ ಬೇಸರದಲ್ಲಿದ ಸೋಮಣ್ಣಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಪ್ ಕರೆ ಮಾಡಿದ್ದಾರೆ.ಈ ರೀತಿಯ ಫಲಿತಾಂಶ ಬರುತ್ತದೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಜತೆ ಪಕ್ಷ, ನಾವು ಇರುತ್ತೇವೆ ಎಂದು ಅಮಿತ್ ಶಾ ಧೈರ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ವಿ.ಸೋಮಣ್ಣ, ಸೋತಾಗಿದೆ, ಏನು ಮಾತಾಡಲಿ? ಮಾತಾಡೋದು ಅಗತ್ಯ ಇಲ್ಲ. ಸೋತಿದ್ದೇನೆ ಅಷ್ಟೇ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದ್ದೆ. ಇದನ್ನ ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತೆಂದು ಹೋದೆ. ಇದೀಗ ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದಾರೆ.
ಜನರ ತೀರ್ಮಾನ ಇದು, ಬದ್ಧರಾಗಬೇಕು. ದೇಶಕ್ಕೆ ಮೋದಿ ಪ್ರಶ್ನಾತೀತ ನಾಯಕರು, ಅವರ ಕೆಲಸಗಳು ಅವಿಸ್ಮರಣೀಯವಾದದ್ದು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸ್ಕೀಮ್ಗಳೇ ಅವರ ಗೆಲುವಿಗೆ ಕಾರಣ ಎಂದರು.