ಸೋಲು ಸ್ವೀಕಾರಾರ್ಹ, ಆದರೆ ಪಾಕಿಸ್ತಾನದಂತೆ ಜನರಿಗೆ ಬೋರ್ ಹೊಡೆಸುವುದಿಲ್ಲ: ರೋಹಿತ್ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್​ ಫೈನಲ್​ಗೂ ಲಗ್ಗೆ ಇಟ್ಟಿದೆ.

ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರವಾಸಿ ತಂಡಕ್ಕೆ 76 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಸಾಧಿಸಿತು.

ಇದೀಗ 3ನೇ ಟೆಸ್ಟ್ ಸೋತ ಬಳಿಕ ಮಾತನಾಡಿರುವ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಪಂದ್ಯಗಳು ಮೂರೇ ದಿನದಲ್ಲಿ ಮುಕ್ತಾಯಗೊಳ್ಳುತ್ತಿರುವ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸೋಲು ಸ್ವೀಕಾರಾರ್ಹ, ಆದರೆ ಪಾಕಿಸ್ತಾನದಂತೆ ನಾವು ಜನರಿಗೆ ಬೋರ್ ಹೊಡೆಸುವುದಿಲ್ಲ ಅಂದಿದ್ದಾರೆ. ಅಲ್ಲದೆ ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾಗುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವಲ್ಲ. ಬದಲಿಗೆ ಭಾರತದ ಹೊರಗೆ ಕೂಡ 5 ದಿನಗಳ ಕಾಲ ಟೆಸ್ಟ್ ಪಂದ್ಯಗಳು ನಡೆಯುತ್ತಿಲ್ಲ ಎಂದಿದ್ದಾರೆ.

ಈ ಹಿಂದೆ ಪಾಕಿಸ್ತಾನದಲ್ಲಿ ನಡೆದ 3 ಟೆಸ್ಟ್ ಪಂದ್ಯಗಳನ್ನು ಅಲ್ಲಿನ ಜನರು ನೀರಸ ಎಂದು ಕರೆದರು. ಆದರೆ ನಾವು ಅದನ್ನು ಆಸಕ್ತಿದಾಯಕವಾಗಿ ಮಾಡುತ್ತಿದ್ದೇವೆ ಎಂದಿದ್ದಾರೆ. ಪಾಕಿಸ್ತಾನ ತನ್ನ ಕೊನೆಯ 5 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಆಡಿತ್ತು. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಮತ್ತು ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಟೆಸ್ಟ್ ಪಂದ್ಯಗಳು ಸಂಪೂರ್ಣ 5 ದಿನಗಳ ಕಾಲ ನಡೆದವು. ಆದರೂ ನ್ಯೂಜಿಲೆಂಡ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳು ಡ್ರಾ ಆಗಿದ್ದವು. ಹೀಗಾಗಿ ಸಂಪೂರ್ಣ 5 ದಿನ ನಡೆದರೂ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದು, ಪಾಕ್ ಫ್ಯಾನ್ಸ್​ಗೆ ಬೇಸರ ತಂದಿತ್ತು.

ಸೋಲನ್ನು ಒಪ್ಪಿಕೊಂಡಿದಲ್ಲದೆ, ನಾವು ಇನ್ನೂ ಕೆಲವು ರನ್ ಗಳಿಸಬೇಕಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ನಾವು ಅತ್ಯಂತ ಕಳಪೆ ಕ್ರಿಕೆಟ್ ಆಡಿದ್ದೇವೆ ಎಂದಿದ್ದಾರೆ. ಇದರೊಂದಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 11 ವಿಕೆಟ್ ಪಡೆದ ನಾಥನ್ ಲಿಯಾನ್ ಅವರನ್ನು ಶ್ಲಾಘಿಸಿದ ಟೀಂ ಇಂಡಿಯಾ ನಾಯಕ, ನಾನು ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಿಲ್ಲ, ಆದರೆ ಭಾರತದಲ್ಲಿ ನಾನು ಎದುರಿಸಿದ ಅತ್ಯುತ್ತಮ ವಿದೇಶಿ ಸ್ಪಿನ್ನರ್ ಎಂದರೆ ಅದು ನಾಥನ್ ಲಿಯಾನ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!