ಹೊಸದಿಗಂತ ವರದಿ ವಿಜಯಪುರ:
ಭೀಮಾಶಂಕರ ಸಕ್ಕರೆ ಕಾರ್ಖಾನೆ ವಿಷಯ ಕುರಿತು ವಿನಾ ಕಾರಣ ಭ್ರಷ್ಟಾಚಾರದ ಆರೋಪ ಮಾಡಿರುವ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಜಾರಿಗೊಳಿಸಿರುವೆ ಎಂದು ಇಂಡಿ ಶಾಸಕ ಹಾಗೂ ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳಿಂದ ಅಸ್ಥಿಪಂಜರದಂತೆ ಅರೆ ಬರೆಯಾಗಿ ನಿಂತುಕೊಂಡಿದ್ದ, ಭೀಮಾಶಂಕರ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿರುವೆ, ಇದು ನನ್ನ ಕನಸಿನ ಕೂಸಾಗಿದ್ದು, ಭೀಮಾತೀರದ ಕಬ್ಬು ಬೆಳೆಗಾರರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಸಹಕಾರಿ ಕಾರ್ಖಾನೆಯಾಗಿ ರೂಪಿಸಿರುವೆ. ಅಲ್ಲದೆ ರೈತರು ನೀಡುವ ಕಬ್ಬಿಗೆ ಕಾರ್ಖಾನೆಯಿಂದ ತಪ್ಪದೆ ಎಂಆರ್’ಪಿ ಪ್ರಕಾರ ಹಣ ಸಂದಾಯ ಮಾಡಲಾಗುತ್ತಿದೆ. ಆದರೂ ಕೆಲ ಕುಹಕಿಗಳು, ಸಕ್ಕರೆ ಕಾರ್ಖಾನೆ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಕ್ಕರೆ ಕಾರ್ಖಾನೆಯ ಇನ್ಷೂರೆನ್ಸ್ ಸೇರಿ ಇತರೆ ವಿಭಾಗದಲ್ಲಿ ಅವ್ಯವಹಾರ ನಡೆದಿದೆ ಎಂದು ಆಧಾರ ರಹಿತ ಆರೋಪ ಮಾಡಿದವರ ವಿರುದ್ಧ, ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಜಾರಿ ಮಾಡಿರುವೆ ಎಂದರು. ಸಕ್ಕರೆ ಕಾರ್ಖಾನೆ ವಿಷಯದಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ. ಹಾಗೇನಾಗಿದ್ದರೆ, ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನವಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಸವಾಲ್ ಹಾಕಿದರು.