ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ತೆರೆಯಲಿವೆ. ಇದೀಗ ಗಾಳಿಯ ಗುಣಮಟ್ಟ ಸುಧಾರಿಸಿದ್ದು, ಇಂದಿನಿಂದ ಶಾಲೆಗಳನ್ನು ತೆರೆಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ವ್ಯವಸ್ಥೆ ಮಾಡಲಾಗಿದೆ.
ದೆಹಲಿಯ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಇಂದಿನಿಂದ ತೆರೆಯಲಿವೆ. ಇದರಲ್ಲಿ ನರ್ಸರಿಯಿಂದ 12ನೇ ತರಗತಿವರೆಗಿನ ಎಲ್ಲಾ ತರಗತಿಗಳನ್ನು ಭೌತಿಕ ಕ್ರಮದಲ್ಲಿ ನಡೆಸಲಾಗುತ್ತದೆ. ಆದರೆ, ಕೆಲವು ಖಾಸಗಿ ಶಾಲೆಗಳು ನರ್ಸರಿಯಿಂದ ಐದನೇ ತರಗತಿವರೆಗಿನ ತರಗತಿಗಳನ್ನು ಮುಚ್ಚಲು ನಿರ್ಧರಿಸಿವೆ. ಮಾಲಿನ್ಯವು ಇನ್ನೂ ಸಂಪೂರ್ಣ ಸುಧಾರಿಸಿಲ್ಲ, ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿವೆ. ಶಾಲೆಗಳಲ್ಲಿ ಬೆಳಿಗ್ಗೆ ಒಂದು ವಾರದವರೆಗೆ ಪ್ರಾರ್ಥನೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.
ಕ್ರೀಡೆಗಳು ಮತ್ತು ಪ್ರಾರ್ಥನಾ ಸಭೆಗಳಂತಹ ಹೊರಾಂಗಣ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದು, ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವಂತೆ ಆದೇಶಿಸಲಾಗಿದೆ.