ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಎಲ್ಲರಲ್ಲಿ ಆತಂಕ ಮೂಡಿಸಿದೆ.
ಸದ್ಯ ಸೈಫ್ ಆಲಿ ಖಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ಪೊಲೀಸರು ಆರೋಪಿಯನ್ನು ಆರೆಸ್ಟ್ ಮಾಡಿ ವಿಚಾರಣೆ ಆರಂಭಿಸಿದ್ದಾರೆ. ಆದರೆ ಸೈಫ್ ಆಲಿ ಖಾನ್ ಆರೋಪಿ ಬಂಧನವಾಗುತ್ತಿದ್ದಂತೆ ದೆಹಲಿ ಅಲರ್ಟ್ ಆಗಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಹಿಂದು ಹೆಸರಿಟ್ಟುಕೊಂಡ ಬಾಂಗ್ಲಾದೇಶ ಅಕ್ರಮ ವಲಸಿಗ ಅನ್ನೋದು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರ ಮೇಲೆ ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚಿಸಿದ್ದಾರೆ.
ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಅಕ್ರಮವಾಗಿ ಭಾರತಕ್ಕೆ ನುಸುಳಿ ಕೆಳೆದ ಕೆಲ ವರ್ಷಗಳಿಂದ ನೆಲೆಸಿದ್ದ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಇಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ. ದೆಹಲಿಯಲ್ಲಿ ಈಗಾಗಲೇ ಬಾಂಗ್ಲಾದೇಶದಿಂದ ಅಕ್ರಮವಾಗಿ ರಾಜಧಾನಿಯಲ್ಲಿ ನೆಲೆಸಿರುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಸೈಫ್ ಘಟನೆ ಬಳಿಕ ಈ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಅಕ್ರಮ ಬಾಂಗ್ಲಾದೇಶಿಗರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸೂಚಿಸಿದ್ದಾರೆ.
ಅಕ್ರಮ ಬಾಂಗ್ಲಾದೇಶಿಗಳು, ಭಾರತಕ್ಕೆ ನುಸುಳಿರುವ ರೋಹಿಂಗ್ಯಗಳು, ಅಪರಾಧಿಗಳು ಸೇರಿದಂತೆ ಅಕ್ರಮ ವಲಸಿಗರ ವಿರುದ್ಧ ಕಟ್ಟು ನಿಟ್ಟಿನ ಕ್ರಮದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ದೆಹಲಿಯಲ್ಲಿ ಅಕ್ರಮ ವಲಸಿಗರಿಂದ ಅಪಾಯ ಹೆಚ್ಚಿದೆ. ಅಕ್ರಮ ನುಸುಳುಕೋರರಿಗೆ ಭಾರತದಲ್ಲಿನ ಕೆಲ ಸಂಸ್ಥೆಗಳು, ವ್ಯಕ್ತಿಗಳು, ಜಾಲಗಳು ಸಹಾಯ ಮಾಡುತ್ತಿದೆ. ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮಾಡಿಸಿಕೊಡಲಾಗುತ್ತಿದೆ. ಇದು ಭಾರತದ ಸುರಕ್ಷತೆಗೆ, ಆಂತರಿಕ ಭದ್ರಗೆ ಎಸೆದ ಸವಾಲಾಗಿದೆ ಎಂದ ವಿಕೆ ಸಕ್ಸೇನಾ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿಯ ಪ್ರತಿ ವಲಯ, ಏರಿಯಾದಲ್ಲಿ ಕಾರ್ಯಾಚರಣೆ ನಡೆಸಲು ಪೊಲೀಸರಿಗೆ ಸೂಚಿಸಿದ್ದಾರೆ. ರೆಸ್ಟೋರೆಂಟ್, ಶಾಪ್ ಸೇರಿದಂತೆ ಎಲ್ಲೆಡೆ ಕಾರ್ಯಾಚರಣೆ ಅಗತ್ಯವಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿಕೆ ಸಕ್ಸೇನಾ ಸೂಚಿಸಿದ್ದಾರೆ.