Wednesday, January 14, 2026
Wednesday, January 14, 2026
spot_img

ದೆಹಲಿ ಕಾರು ಸ್ಫೋಟ: ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಖರೀದಿಸಿದ್ರಾ ಆರೋಪಿಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಲವು ರಹಸ್ಯ ಬೆಳಕಿಗೆ ತರುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಉಮರ್‌ ಮೊಹಮ್ಮದ್‌ ಆಲಿಯಾಸ್‌ ಉಮರ್‌ ಉನ್‌ನಬಿ ನವೆಂಬರ್‌ 10ರ ಸಂಜೆ ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಹೋಗಿ ಮೆಟ್ರೋ ಸ್ಟೇಷನ್‌ ಬಳಿ ಸ್ಫೋಟಿಸಿ 13 ಮಂದಿಯ ಸಾವಿಗೆ ಕಾರಣವಾಗಿದ್ದ. ಈ ಸಂಚಿನಲ್ಲಿ ಭಾಗಿಯಾದ ಉಗ್ರರು ಸಂವಹನಕ್ಕಾಗಿ ನೇಪಾಳದಿಂದ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ ಮತ್ತು ಉತ್ತರ ಪ್ರದೇಶದ ಕಾನ್ಪುರದಿಂದ ಸಿಮ್‌ ಖರೀದಿಸಿರುವ ವಿವರ ಗೊತ್ತಾಗಿದೆ.

ದೆಹಲಿ ಸ್ಫೋಟದ ಸಂಚಿನ ಭಾಗವಾಗಿ ಬರೋಬ್ಬರಿ 7 ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ ಮತ್ತು 17 ಸಿಮ್‌ ತೆಗೆದುಕೊಂಡಿದ್ದರು. ಈ ಪೈಕಿ 6 ಸಿಮ್‌ ಕಾನ್ಪುರದಲ್ಲಿ ಖರೀದಿಸಲಾಗಿದೆ. 2 ಸಿಮ್‌ಗಳನ್ನು ಕಾನ್ಪುರದ ಕೇಂದ್ರ ವಸತಿ ಮತ್ತು ವಾಣಿಜ್ಯ ಪ್ರದೇಶವಾದ ಬೆಕೊಂಗಂಜ್‌ನ ಐಡಿ ಬಳಸಿಕೊಂಡು ಖರೀದಿಸಿರುವುದು ಕಂಡು ಬಂದಿದೆ.

ದೆಹಲಿ ಸ್ಫೋಟಕ್ಕೂ ಮುನ್ನ ಮೂವರು ವೈದ್ಯ ಭಯೋತ್ಪಾದಕರು ಡಾ. ಉಮರ್‌ ಮೊಹಮ್ಮದ್‌ ಜತೆ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ. ಈ ಮೂವರನ್ನು ಡಾ. ಪರ್ವೇಜ್‌, ಡಾ, ಮೊಹಮ್ಮದ್‌ ಆರಿಫ್‌ ಮತ್ತು ಡಾ. ಫಾರುಖ್‌ ಅಹಮ್ಮದ್‌ ದಾರ್‌ ಎಂದು ಗುರುತಿಸಲಾಗಿದೆ. ಈ ಪೈಕಿ ಡಾ. ಪರ್ವೇಜ್‌ ಈಗಾಗಲೇ ಬಂಧಿತಳಾಗಿರುವ ಹರಿಯಾಣದ ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ವೈದ್ಯೆ ಡಾ. ಶಹೀನ್‌ ಶಹೀದ್‌ನ ಸಹೋದರ. ಈತ ಲಖನೌ ಇಂಟೆಗ್ರಲ್‌ ವಿಶ್ವ ವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಡಾ. ಮೊಹಮ್ಮದ್‌ ಆರಿಫ್‌ ಕಾನ್ಪುರರ ಜಿಎಸ್‌ವಿಎಂ ಮೆಡಿಕಲ್‌ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ. ಇನ್ನು ಡಾ. ಫಾರುಖ್‌ ಅಹಮ್ಮದ್‌ ಉತ್ತರ ಪ್ರದೇಶದ ಹಾರ್ಪುರ ಜಿಎಸ್‌ ಮೆಡಿಕಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಡಾ. ಶಹೀನ್‌ ಮತ್ತು ಮತ್ತೊಬ್ಬ ಶಂಕಿತ ಉಗ್ರ ಡಾ. ಮುಜಾಮ್ಮಿಲ್‌ ನವೆಂಬರ್‌ 8ರ ಬೆಳಗ್ಗೆಯವರೆಗೆ ಉಮರ್‌ ಜತೆ ಸಂಪರ್ಕದಲ್ಲಿದ್ದುದು ಕೂಡ ಗೊತ್ತಾಗಿದೆ. ಸದ್ಯ ಎಲ್ಲ ರೀತಿಯಲ್ಲೂ ವಿಚಾರಣೆ ನಡೆಯುತ್ತಿದೆ.
.

Most Read

error: Content is protected !!