ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಪಕ್ಷದ ಕೆಲವು ಹಿರಿಯ ನಾಯಕರ ವಿರುದ್ಧ ದೆಹಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಕ್ರಮ ಆರಂಭಿಸಲು ಮುಂದಾಗಿದೆ.
ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಈ ಕುರಿತು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಮಾನಹಾನಿಕರ ಪೋಸ್ಟ್‌ಗಳನ್ನು ಹಂಚಲಾಗಿದೆ ಎಂದು ನ್ಯಾಯಮೂರ್ತಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಸೇರಿದಂತೆ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಮತ್ತು ದುರ್ಗೇಶ್ ಪಾಠಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಇದೇ ವೇಳೆ, ದೆಹಲಿ ಅಬಕಾರಿ ಪ್ರಕರಣದ ವಿಚಾರಣೆಯಿಂದ ತಾವು ಹಿಂದೆ ಸರಿಯುವುದಾಗಿ ನ್ಯಾಯಮೂರ್ತಿ ಘೋಷಿಸಿದರು. ಆದರೆ ನ್ಯಾಯಾಂಗ ನಿಂದನೆ ವಿಚಾರದಲ್ಲಿ ಕ್ರಮ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
“ರಾಜಕೀಯ ಒತ್ತಡ ಅಥವಾ ಅಭಿಯಾನಗಳಿಗೆ ನ್ಯಾಯಾಂಗ ತಲೆಬಾಗುವುದಿಲ್ಲ” ಎಂದು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಕಾನೂನು ಹೋರಾಟವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕ ಅಭಿಯಾನವನ್ನಾಗಿ ರೂಪಿಸಲು ಪ್ರಯತ್ನಿಸಲಾಗಿದೆ ಎಂದು ಅವರು ಟೀಕಿಸಿದರು.
ಈ ಘಟನೆ ದೇಶದ ರಾಜಕೀಯ ಮತ್ತು ನ್ಯಾಯಾಂಗ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



