October 14, 2026
Wednesday, October 14, 2026
spot_img

ಕಾಮಗಾರಿ ಹೆಸರಲ್ಲಿ ಫಲ್ಗುಣಿ ಒಡಲಿಗೆ ಮಣ್ಣು: ಎನ್ ಇಸಿಎಫ್ ಕಳವಳ, ತಕ್ಷಣ ತೆರವಿಗೆ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಸುಲ್ತಾನ್ ಬತ್ತೇರಿ-ತಣ್ಣೀರ್‌ಬಾವಿ ಸಂಪರ್ಕಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಗೆ ಅನುಕೂಲವಾಗುವಂತೆ ಫಲ್ಗುಣಿ ನದಿಗೆ ಅಡ್ಡಲಾಗಿ ಹಾಕಿರುವ ಮಣ್ಣನ್ನು ಮಳೆಗಾಲದ ಮೊದಲು ತೆಗೆಯಯದಿದ್ದರೆ ಹಲವು ಪ್ರದೇಶಗಳು ಮುಳುಗಡೆಯಾಗಲಿದೆ. ಆದ್ದರಿಂದ ಆದಷ್ಟು ಶೀಘ್ರ ಮಣ್ಣನ್ನು ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಇಸಿಎಫ್)ಸದಸ್ಯರು ಆಗ್ರಹಿಸಿದ್ದಾರೆ.

ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಎನ್‌ಇಸಿಎಫ್ ಸದಸ್ಯರು, ಸೇತುವೆ ನಿರ್ಮಾಣದ ಉದ್ದೇಶದಿಂದ ಹಾಕಿರುವ ಮಣ್ಣನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.

ಎನ್‌ಇಸಿಎಫ್ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ, ಸೇತುವೆ ನಿರ್ಮಾಣ ಕಾಮಗಾರಿಯ ಹೆಸರಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಸಹಜ ನೀರಿನ ಹರಿವಿಗೆ ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ನೀರು ಹಿಮ್ಮುಖವಾಗಿ ಚಲಿಸಿ ಬೆಂಗ್ರೆ, ಕೊಟ್ಟಾರ, ಮಾಲೆಮಾರ್, ಕೂಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮಳೆಗಾಲದಲ್ಲಿ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದರು.

ಇದನ್ನೂ ಓದಿ:

ಮಣ್ಣನ್ನು ತೆರವುಗೊಳಿಸದಿದ್ದರೆ ಸ್ಥಳೀಯರು ಅದನ್ನು ತಾತ್ಕಾಲಿಕ ರಸ್ತೆವಾಗಿ ಬಳಸಲು ಆರಂಭಿಸಬಹುದು. ನದಿಯಲ್ಲಿ ಮಣ್ಣು ತುಂಬದೇ ಕೂಡ ಸೇತುವೆ ನಿರ್ಮಿಸಬಹುದಿತ್ತು. ಮಳೆ ತೀವ್ರಗೊಳ್ಳುವ ಮುನ್ನವೇ ಮಣ್ಣನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಮಣ್ಣು ತೆರವುಗೊಳಿಸುತ್ತೇವೆ: ಅರುಣ್ ಪ್ರಭ

ಸುಲ್ತಾನ್ ಬತ್ತೇರಿ ಭಾಗದಲ್ಲಿ ಸೇತುವೆಯ ಎಲ್ಲಾ ಪಿಲ್ಲರ್ ಕಾಮಗಾರಿಗಳು ಪೂರ್ಣಗೊಂಡಿವೆ. ಎಲ್ಲಾ ಕಾಮಗಾರಿ ಪೂರ್ಣಗೊಂಡ ಬಳಿಕ ಮಣ್ಣು ತೆರವುಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಡಿ ಎಂಡಿ ಅರುಣ್ ಪ್ರಭ ತಿಳಿಸಿದ್ದಾರೆ.

ಸೇತುವೆ ನಿರ್ಮಾಣವಾಗುವಾಗ ಮಣ್ಣು ಹಾಕುವುದು ಸಾಮಾನ್ಯ.ಕಾಮಗಾರಿ ಮುಗಿಯುತ್ತಿದ್ದಂತೆ ಮಣ್ಣನ್ನು ತೆರವುಗೊಳಿಸಲೇ ಬೇಕಾಗುತ್ತದೆ. ಇದು ಸೇತುವೆ ನಿರ್ಮಾಣದಲ್ಲಿ ಅನುಸರಿಸುವ ಸಾಮಾನ್ಯ ವಿಧಾನ ಎಂದು ಸ್ಪಷ್ಟಪಡಿಸಿದರು.

Must Read