ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಐತಿಹಾಸಿಕ ಜಿ20 ಶೃಂಗಸಭೆಗೆ ದೆಹಲಿ ಸಂಪೂರ್ಣ ಸಜ್ಜಾಗಿದ್ದು, ವಿಶ್ವ ನಾಯಕರನ್ನು ಬರಮಾಡಿಕೊಳ್ಳುತ್ತಿದೆ. ವಿಶ್ವದ ನಾಯಕರುಗಳು ಸಭೆಗೆ ಆಗಮಿಸುತ್ತಿದ್ದು, ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪೊಲೀರು, ಅರೆಸೈನಿಕ ಪಡೆಗಳು ಹಾಗೂ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಕ್ಸ್ ವುಮೆನ್ ಹಾಗೂ ಸಶಸ್ತ್ರಪಡೆಗಳು ಗಸ್ತು ತಿರುಗುತ್ತಿದ್ದು, ಗಡಿ ಪ್ರದೇಶದಲ್ಲಿಯೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ದೆಹಲಿ ಪೊಲೀಸರ ಜೊತೆ 50,000ಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿ, ಕೆ೯ ಶ್ವಾನದಳ ಹಾಗೂ ಮೌಂಟೆಡ್ ಪೊಲೀಸರು ಇದ್ದಾರೆ. ವಿಮಾನ ನಿಲ್ದಾಣದಿಂದ ಹೊಟೇಲ್‌ಗೆ, ಹೊಟೇಲ್‌ನಿಂದ ಶೃಂಗಸಭೆ ನಡೆಯುವ ಸ್ಥಳಕ್ಕೆ ವಿಶ್ವದ ನಾಯಕರುಗಳಿಗೆ ದೆಹಲಿ ಪೊಲೀಸರು ಫೂಲ್‌ಪ್ರೂಫ್ ಸೆಕ್ಯುರಿಟಿ ಒದಗಿಸಲಿದ್ದಾರೆ.
ಭಾರತೀಯ ವಾಯುಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಕೇಂದ್ರೀಯ ಸಶಸ್ತ್ರಪಡೆಗಳಂಥ ವಿಶೇಷ ಕೇಂದ್ರೀಯ ಸಂಸ್ಥೆಗಳು ನೆರವು ನೀಡಿವೆ. ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪಿಕೆಟ್‌ಗಳನ್ನು ಅಳವಡಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಇನ್ನು ಇಂದು ಬೆಳಗ್ಗಿನಿಂದಲೇ ದೆಹಲಿಯಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ನಾಳೆ ಬೆಳಗ್ಗೆ 5 ರಿಂದ ಭಾನುವಾರ ರಾತ್ರಿ 12 ಗಂಟೆವರೆಗೆ ನಿಯಂತ್ರಿತ ವಲಯ-1 ಎಂದು ಗೊತ್ತುಪಡಿಸಲಾಗಿದೆ. ಡ್ರೋನ್ ಹಾರಾಟ, ಆನ್‌ಲೈನ್ ಡೆಲಿವರಿ ಇನ್ನಿತರ ಸೇವೆಗಳ ಮೇಲೆ ನಿಷೇಧ ಹೇರಲಾಗಿದೆ.