ದೆಹಲಿ ಮಾಲಿನ್ಯ: ಕೇಜ್ರೀವಾಲ್‌ ಯೂ ಟರ್ನ್‌ ಹೀಗಿದೆ ನೋಡಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಈಗ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿರುವುದು ಗೊತ್ತಿರುವ ಸಂಗತಿಯೇ. ʼಮಾಲಿನ್ಯವು ಕೇವಲ ದೆಹಲಿಯ ಸಮಸ್ಯೆಯೊಂದೇ ಅಲ್ಲ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕುʼ ಎಂದು ಆಪ್‌ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಕಳೆದ ವರ್ಷದವರೆಗೂ ದೆಹಲಿ ಮಾಲಿನ್ಯಕ್ಕೆ ನೆರೆಯ ರಾಜ್ಯ ಸರ್ಕಾರಗಳನ್ನು ದೂರುತ್ತಿದ್ದ ಕೇಜ್ರೀವಾಲ್‌, ಈಗ ಪಂಜಾಬಿನಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿರುವುದರಿಂದ ಈ ವರ್ಷ ಅವರ ಬಾಯಲ್ಲಿ ಬಂದ ಮಾತುಗಳು ಬದಲಾಗಿವೆ.

ದೆಹಲಿಯ ಮಾಲಿನ್ಯಕ್ಕೆ ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವುದೇ ಕಾರಣ ಎಂದು ಕೇಜ್ರೀವಾಲ್‌ ಕಳೆದ ವರ್ಷದವರೆಗೂ ದೂರುತ್ತಿದ್ದರು. ನೆರೆಯ ರಾಜ್ಯಗಳ ಸರ್ಕಾರಗಳು ಇದನ್ನು ತಡೆಗಟ್ಟಲು ಏನೂ ಮಾಡುತ್ತಿಲ್ಲ ಎಂದು ಹೇಳಿದ್ದರು.

ಆದರೆ ಈಗ ಪಂಜಾಬ್‌ ನಲ್ಲಿ ಆಪ್‌ ಸರ್ಕಾರವಿರುವುದರಿಂದ ಈ ಬೈಗುಳದಾಟ ಬದಲಾಗಿರುವಂತೆ ತೋರುತ್ತಿದೆ. ಕಳೆದ ವರ್ಷಗಳವರೆಗೂ ನೆರೆಯ ರಾಜ್ಯಗಳನ್ನು ಹೊಣೆಯಾಗಿಸಿದ್ದ ಕೇಜ್ರಿವಾಲ್‌ ಈಗ  ʼಇದು ಉತ್ತರ ಭಾರತದ ಎಲ್ಲ ನಗರಗಳ ಸಮಸ್ಯೆʼ ಎಂದಿದ್ದಾರೆ. ಅಲ್ಲದೇ ಈ ಕುರಿತು ಪಂಜಾಬ್‌ ಸರ್ಕಾರವನ್ನೂ ಸಮರ್ಥಿಸಿಕೊಂಡಿದ್ದು ಈಗ ತಾನೆ ಒಂದು ವರ್ಷ ಪೂರೈಸಿರುವ ಪಂಜಾಬ್‌ನ ಆಪ್‌ ಸರ್ಕಾರ ಕಡಿಮೆ ಸಮಯದಲ್ಲಿ ಉತ್ತಮ ಪ್ರಯತ್ನ ಮಾಡಿದೆ ಎಂದೂ ಹೇಳಿದ್ದಾರೆ.

ಇನ್ನು ಕಳೆದ ವರ್ಷದಲ್ಲಿನ ತ್ಯಾಜ್ಯ ದಹನಕ್ಕೂ ಈ ವರ್ಷದಲ್ಲಿನ ತ್ಯಾಜ್ಯದಹನಕ್ಕೂ ತಾಳೆ ಹಾಕಿದರೆ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿನ ತ್ಯಾಜ್ಯ ದಹನವು 19ಶೇಕಡಾ ಏರಿಕೆ ಕಂಡಿದೆ.

ಮತ್ತೊಂದೆಡೆ ಹರಿಯಾಣ ರಾಜ್ಯದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವ ಪ್ರಕ್ರಿಯೆ ಇದೇ ಅವಧಿಯಲ್ಲಿ 30.6 ಶೇ. ಕುಸಿದಿದೆ. ಅದೇ ರೀತಿ ಉತ್ತರ ಪ್ರದೇಶವೂ ಕೂಡ 36 ಶೇಕಡಾ ಕುಸಿತ ದಾಖಲಿಸಿದೆ.

ಕೆಲ ವರದಿಗಳು ಹೇಳೋ ಪ್ರಕಾರ ಉತ್ತರ ಭಾರತದ ಒಟ್ಟಾರೆ ಕೃಷಿ ದಹನದಲ್ಲಿ ಪಂಜಾಬ್‌ ಅತಿ ದೊಡ್ಡ ಪಾಲು ಹೊಂದಿದ್ದು 86 ಪ್ರತಿಶತದಷ್ಟು ಕೃಷಿ ಬೆಂಕಿಗೆ ಪಂಜಾಬ್ ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!