Thursday, February 29, 2024

ಮುಜುಗರ, ಅವಮಾನದಿಂದ ಜನರ ಗಮನ ಬೇರೆಡೆ ಸೆಳೆಯಲು ದೆಹಲಿ ಪ್ರತಿಭಟನೆಯ ನಾಟಕ: ಆರ್ ಅಶೋಕ್

ಹೊಸದಿಗಂತ ವರದಿ,ಬೆಂಗಳೂರು:

ಮಾಜಿ ಉಪಪ್ರಧಾನಿ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿರುವುದನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಉಕ್ಕಿನ ಮನುಷ್ಯ ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರುವುದು ಸಂತಸ ತಂದಿದೆ. ತತ್ವ, ಸಿದ್ಧಾಂತದಲ್ಲಿ ಎಂದಿಗೂ ರಾಜಿಯಾಗದ, ರಾಜಕಾರಿಣಿ ಅಂದರೆ ಹೇಗಿರಬೇಕು ಎನ್ನುವ ರೀತಿ ಆದರ್ಶ ವ್ಯಕ್ತಿತ್ವ ಹೊಂದಿದ್ದ ಮೇರು ನಾಯಕ ಅಡ್ವಾಣಿಯವರು. ಅಡ್ವಾಣಿ ಜೊತೆ ಮೂರು ಸಂಧರ್ಭಗಳಲ್ಲಿ ತಮ್ಮ ಒಡನಾಟವನ್ನು ನೆನೆದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಎಲ್.ಕೆ ಅಡ್ವಾಣಿ ಅವರ ರಥಯಾತ್ರೆ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾಗ ಭಜರಂಗದಳದ ಕಾರ್ಯಕರ್ತನಾಗಿ ಅವರ ಜೊತೆ ಇದ್ದೆ ಎಂದು ನೆನಪಿಸಿಕೊಂಡ ಆರ್ ಅಶೋಕ್, ಅಯೋಧ್ಯೆಯಲ್ಲಿ ಇವತ್ತು ರಾಮಮಂದಿರ ಉದ್ಘಾಟನೆಯಾಗಿದೆ ಅಂದ್ರೆ ಅದಕ್ಕೆ ಕಾರಣಕರ್ತರು ಅಡ್ವಾಣಿಯವರು. ಅವತ್ತು ಅವರು ರಾಮಜ್ಯೋತಿ ಹಚ್ಚಿಲ್ಲದಿದ್ದರೆ ರಾಮ ಮಂದಿರ ನಿರ್ಮಾಣವಾಗೋಕೆ ಇನ್ನೂ ಎಷ್ಟು ವರ್ಷ ಬೇಕಿತ್ತೋ ಏನೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾಣಿ ಅವರ ಜೊತೆಗೆ ಬೆಂಗಳೂನಲ್ಲಿ ಜೈಲುವಾಸ, ಅಯೋಧ್ಯೆಯಲ್ಲಿ 21 ದಿನ ಕರಸೇವೆಯಲ್ಲಿ ಪಾಲ್ಗೊಂಡ ನೆನಪುಗಳನ್ನು ಹಂಚಿಕೊಂಡರು.

ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದಿಂದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು ಎಷ್ಟು ಅನುದಾನ ಸಿಕ್ಕಿದೆ ಎಂಬುದರ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, “ಒಂದು ವೈಟ್ ಪೇರ್ ಬಿಡುಗಡೆ ಮಾಡಿ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಎಷ್ಟು ಬಿಡುಗಡೆ ಮಾಡಿದ್ದರು, ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಬಿಡುಗಡೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗಲಿ. ಜನರು ತೀರ್ಮಾನ ಮಾಡಲಿ. ಕರ್ನಾಟಕದಿಂದ ಜಾಸ್ತಿ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಒಪ್ಪುತ್ತೇವೆ. ಇನ್ನು ಮಹಾರಾಷ್ಟ್ರ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುತ್ತಿದೆ ಅಲ್ಲವೇ, ಅವರಿಗೆ ಎಷ್ಟು ಕೊಟ್ಟಿದ್ದಾರೆ? ದಿಲ್ಲಿಗೆ ಎಷ್ಟು ಕೊಟ್ಟಿದ್ದಾರೆ? ಎಂಬುದು ಎಲ್ಲರಿಗೂ ತಿಳಿಯಲಿ ಎಂದು ತಾಕೀತು ಮಾಡಿದರು.

ತೆರಿಗೆ ಆಧಾರದ ಮೇಲೆ ಹೋಲಿಕೆ ಮಾಡಬಾರದು
ತಾರತಮ್ಯ ವಿಚಾರವಾಗಿ ಮಾತನಾಡುತ್ತಾ, “ನೀವು ಅನುದಾನದ ವಿಚಾರವಾಗಿ ದೇಶಕ್ಕೆ ಹೋಗಬೇಡಿ, ಇಲ್ಲಿ ನಮ್ಮ ರಾಜ್ಯದ ವಿಷಯವನ್ನೇ ಹೇಳಿ. ಬೆಂಗಳೂರು ಒಂದರಿಂದಲೆ ರಾಜ್ಯದ ಶೇ.65 ಟ್ಯಾಕ್ಸ್ ಬರುತ್ತದೆ. ಹಾಗಾದರೆ ಬೆಂಗಳೂರಿಗೆ ಕೊಟ್ಟಿರೋದು ಎಷ್ಟು? ಉಳಿದ ಜಿಲ್ಲೆಗಳಿಗೆ ಸಿಕ್ಕಿರೋದು ಎಷ್ಟು? ಅನುದಾನ ತಾರತಮ್ಯಕ್ಕಾಗಿ ಕರ್ನಾಟಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅಂತ ಕೂಗಿತ್ತು. ಕರ್ನಾಟಕಕ್ಕೆ ನಾವು ನೀರು ಕೊಡುತ್ತೇವೆ, ನಾವು ಕಾಫಿ ಬೆಳೆಯುತ್ತೇವೆ. ನಾವು ಹೆಚ್ಚಿನ ತೆರಿಗೆ ಕಟ್ಟೋರು ಎಂದು ಕೊಡಗಿನವರು ಹೇಳಿದ್ದರು. ಆಗ ಸಿದ್ದರಾಮಯ್ಯ ಅವರೇ ತೆರಿಗೆ ಆಧಾರದ ಮೇಲೆ ರಾಜ್ಯ ಇಬ್ಭಾಗ ಮಾಡಲು ಆಗುವುದಿಲ್ಲ ಅಂತ ಹೇಳಿದ್ದರು. ಈಗ ತಮ್ಮ ಪಕ್ಷದವರೇ ಟ್ಯಾಕ್ಸ್ ಹಾಗೂ ಅನುದಾನದ ಆಧಾರದಲ್ಲಿ ದೇಶ ಇಬ್ಭಾಗ ಮಾಡಲು ಮುಂದಾಗಿರುವುದು ಸರಿಯೇ ಎಂದು ತಿರುಗೇಟು ಮಾಡಿದರು.

“ರಾಜ್ಯಕ್ಕೆ ಬೆಂಗಳೂರಿನಿಂದ ಶೇ.65 ಟ್ಯಾಕ್ಸ್ ಬರುತ್ತದೆ. ಆದರೆ. ಸರ್ಕಾರದಿಂದ ಬೆಂಗಳೂರಿಗೆ ಶೇ.5 ಪರ್ಸೆಂಟ್ ಅನುದಾನವನ್ನೂ ಕೊಟ್ಟಿಲ್ಲ. ಯಾವ ಜಿಲ್ಲೆಯಿಂದ ಎಷ್ಟು ಬರುತ್ತದೆಯೋ, ಅಷ್ಟು ಅನುದಾನ ಕೊಡಲು ಸಾಧ್ಯವಾ? ಎಲ್ಲಿ ಜನ ಕಷ್ಟದಲ್ಲಿದ್ದಾರೆ, ಎಲ್ಲಿ ಅಭಿವೃದ್ದಿ ಆಗಿಲ್ಲವೋ ಅಲ್ಲಿಗೆ ನೆರವಾಗಬೇಕು ಎಂಬುದು ಸಂವಿಧಾನ ಆಶಯ. ಯಾವ ಮಕ್ಕಳು ಎಷ್ಟು ಸಂಪಾದನೆ ಮಾಡ್ತಾರೆ, ಎಂಬುದರ ಮೇಲೆ ತಾಯಿ ಊಟ ನೀಡಲ್ಲ. ಮುಖ್ಯಮಂತ್ರಿಗಳಿಗೆ ಈ ಕಾಮನ್ ಸೆನ್ಸ್ ಇರಬೇಕು” ಎಂದು ಕಿಡಿ ಕಾರಿದರು.

ಕೇಂದ್ರ ಸರ್ಕಾರದಿಂದ ಯಾವುದೇ ತಾರತಮ್ಯ ಆಗಿಲ್ಲ
“ಕರ್ನಾಟಕಕ್ಕೆ ಬರಬೇಕಾದ ಎಲ್ಲಾ ಹಣ ರಾಜ್ಯಕ್ಕೆ ಬಂದಿದೆ. ಕರ್ನಾಟಕ ರಾಜ್ಯಕ್ಕೆ ಯಾವುದೇ ಬಾಕಿ ಇಲ್ಲ ಎಂದು ಸ್ವತಃ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟರ ಮೇಲೂ ಏನಾದರೂ ತಕರಾರು ಇದ್ದರೆ ಖರ್ಗೆಯವರು ರಾಜ್ಯಸಭೆಯಲ್ಲಿ ಮಾತನಾಡಬಹುದಿತ್ತು. ಡಿ.ಕೆ. ಸುರೇಶ್ ಅವರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು ಅಲ್ಲವೇ? 9 ವರ್ಷಗಳಿಂದ ಸೈಲೆಂಟ್ ಆಗಿದ್ದು, ಈಗ ಚುನಾವಣೆ ಬಂದಿದೆ ಅಂತ ನಾಟಕ ಶುರು ಮಾಡಿದ್ದಾರೆ” ಎಂದು ಪ್ರಶ್ನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!