ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಸತ್ಯಾನಿಕೇತನ ಕಟ್ಟಡ ಕುಸಿದು ಬಿದ್ದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಈವರೆಗೂ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ದೊಡ್ಡ ಕಟ್ಟಡ ಕುಸಿತವಾಗಿ ಬಿದ್ದಿರುವ ಭಾರೀ ಅವಶೇಷಗಳನ್ನು ತೆಎರವುಗೊಳಿಸಿ ಜನರ ರಕ್ಷಣೆಗಾಗಿ ಕೆಲಸ ಮಾಡಲಾಗುತ್ತಿದೆ. ತಡರಾತ್ರಿ ಕಾರ್ಯಾಚರಣೆ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಅಗ್ನಿಶಾಮಕ ಸೇವೆ, ದೆಹಲಿ ಪೊಲೀಸ್ ಹಾಗೂ ಇನ್ನಿತರ ಸಂಸ್ಥೆಗಳ ತಂಡದ ನೆರವಿನಿಂದ ಭಾರೀ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಇದು ಸೌತ್ ಕ್ಯಾಂಪಸ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮುಖ ವಸತಿ ಗೃಹವಾಗೊದ್ದು, ಬಹುತೇಕ ವಿದ್ಯಾರ್ಥಿಗಳೇ ಇದ್ದರು ಎನ್ನಲಾಗಿದೆ. ಸುಮಾರು 30 ವರ್ಷ ಹಳೆಯದಾದ ಈ ಐದು ಅಂತಸ್ತಿನ ಕಟ್ಟಡಗಳಲ್ಲಿ 15 ಕೊಠಡಿಗಳಿವೆ. ಪ್ರತೀ ಕೊಠಡಿಯಲ್ಲಿಯೂ ಮೂವರು ವಿದ್ಯಾರ್ಥಿಗಳು ಇದ್ದರು ಎಂದು ಹೇಳಲಾಗಿದೆ.
ಪ್ರತೀ ವಿದ್ಯಾರ್ಥಿಯಿಂದ 12 ಸಾವಿರ ರೂಪಾಯಿ ಬಾಡಿಗೆ
ಪ್ರತೀ ವಿದ್ಯಾರ್ಥಿಯಿಂದ 12 ಸಾವಿರ ರೂಪಾಯಿ ಬಾಡಿಗೆ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ. ಕೇರಳ, ಹರಿಯಾಣ, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳಿಂದ ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ನೆಹರು ಕಾಲೇಜು, ಆತ್ಮಾರಾಮ ಸನಾತನ ಧರ್ಮ ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಈ ಪಿಜಿಯಲ್ಲಿ ನೆಲೆಸಿದ್ದರು. ಮನೆಯ ಮಾಲೀಕರು ಕಟ್ಟಡಕ್ಕೆ ಪಿಜಿ ಎಂಬ ಫಲಕ ಹಾಕಿ ಬಾಡಿಗೆ ಪಡೆಯುತ್ತಿದ್ದಾರೆ. ಓನರ್ ಒಂದು ದಿನಕ್ಕೂ ಕಟ್ಟಡದ ಬಳಿ ಬಂದಿಲ್ಲ. ಪ್ರತೀ ತಿಂಗಳು ಫೋನ್‌ನಲ್ಲಿ ಹಣ ಕಳಿಸುವಂತೆ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಐಸಿಸಿ ಉತ್ತರಾಖಂಡ್ ಉಸ್ತುವಾರಿ ಕುಮಾರಿ ಸೆಲ್ವಾ ಹೇಳಿದ್ದೇನು?
ಕಾಂಗ್ರೆಸ್ ನಾಯಕಿ ಹಾಗೂ ಎಐಸಿಸಿ ಉತ್ತರಾಖಂಡ್ ಉಸ್ತುವಾರಿ ಕುಮಾರಿ ಸೆಲ್ವಾ ಮಾತನಾಡಿ, ಇಂತವ ವಸತಿ ನಿಲಯಗಳಲ್ಲಿ ವಾಸಿಸುವ ಇನ್ನೂ ಅನೇಕ ವಿದಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳವಾಗುತ್ತಿದೆ ಎಂದಿದ್ದಾರೆ. ಸರ್ಕಾರ ಇಂತಹ ಕಟ್ಟಡಗಳಿಗೆ ಪರ್ಮಿಷನ್ ಕೊಟ್ಟಿದ್ದು ಯಾಕೆ? ಉತ್ತಮ ಭವಿಷ್ಯ ನಿರ್ಮಿಸಿಕೊಂಡು ಬನ್ನಿ ಎಂದು ಮಕ್ಕಳ ಪೋಷಕರು ಅವರನ್ನು ದೆಹಲಿಗೆ ಕಳುಹಿಸಿರುತ್ತಾರೆ. ಆದರೆ ಮಕ್ಕಳೇ ಇಲ್ಲದಮೇಲೆ ಭವಿಷ್ಯ ಎಲ್ಲಿದೆ? ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಒಬ್ಬರಾದರೂ ಬಂದು ಇಲ್ಲಿ ಏನಾಗಿದೆ ನೋಡ್ತಾ ಇದ್ದಾರಾ? ಪೋಷಕರಿಗೆ ಏನು ಉತ್ತರ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.
https://twitter.com/findkitty7/status/2096698022524842439
ಬ್ಲೂಪ್ರಿಂಟ್‌ನಲ್ಲಿಯೇ ದೋಷವಿದೆ
ಕೆಲವು ಕಟ್ಟಡಗಳ ಬ್ಲೂಪ್ರಿಂಟ್‌ಗಳಲ್ಲಿ ದೋಷವಿದೆ. ಕಟ್ಟಡ ಕಟ್ಟುವ ಮುನ್ನ ಇರುವ ಬ್ಲೂ ಪ್ರಿಂಟ್‌ಗೂ ಕಟ್ಟಿರುವ ಕಟ್ಟಡಕ್ಕೂ ಸಂಬಂಧವೇ ಇಲ್ಲದಂತಿದೆ. ಮೊದಲು ಎರಡು ಫ್ಲೋರ್ ಎಂದು ಹೇಳಿ ಪರ್ಮಿಷನ್ ತೆಗೆದುಕೊಂಡು ನಂತರ ಐದಾರು ಫ್ಲೋರ್ ಅವೈಜ್ಞಾನಿಕವಾಗಿ ಕಟ್ಟಿದ್ದಾರೆ. ಎಲ್ಲವೂ ಕಳಪೆ ಕ್ವಾಲಿಟಿಯ ಮಟೀರಿಯಲ್ ಬಳಕೆ ಮಾಡಲಾಗಿದೆ. ದೆಹಲಿಯ ಪ್ರತೀ ಕಟ್ಟಡದ ಪರೀಕ್ಷೆಯೂ ಆಗಬೇಕು ಎಂದಿದ್ದಾರೆ.
ನೀರಿನಿಂದ ದುರ್ಬಲವಾಗಿದ್ದ ಕಟ್ಟಡ
ಸುಮಾರು 30 ವರ್ಷ ಹಳೆಯದಾದ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು, ಸದಾ ನೀರು ನಿಂತಿರುತ್ತಿತ್ತು. ಇದರಿಂದಾಗಿ ಬಿಲ್ಡಿಂಗ್ ದುರ್ಬಲಗೊಂಡಿಬಹುದು ಎನ್ನಲಾಗಿದೆ. ಇನ್ನು ಭಾನುವಾರ ಈ ಅವಘಡ ಸಂಭವಿಸಿದ ಕಾರಣ ಹಲವು ವಿದ್ಯಾರ್ಥಿಗಳ ಪ್ರಾಣ ಉಳಿದಿದೆ. ಭಾನುವಾರ ಎಂದು ವಿದ್ಯಾರ್ಥಿಗಳು ಮನೆಗೆ ತೆರಳಿದ್ದು, ಜೀವ ಉಳಿಸಿಕೊಂಡಿದ್ದಾರೆ.
ಈ ದುರಂತದ ಬೆನ್ನಲ್ಲೇ ದೆಹಲಿಯ ಸತ್ಯ ನಿಕೇತನ, ಮುಖರ್ಜಿ ನಗರ, ಕರೋಲ್ ಬಾಗ್ ಸೇರಿದಂತೆ ವಿದ್ಯಾರ್ಥಿಗಳ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.



