ಹೊಸದಿಗಂತ ಡಿಜಿಟಲ್ ಡೆಸ್ಕ್ :
ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಆರಂಭವಾಗಿದ್ದು, ಇದು ದೇಶದಲ್ಲಿಯೇ ಮಾದರಿಯಾಗಲಿದೆ. ಶೇ 75ರಷ್ಟು ರಕ್ಷಣಾ ವಿಮಾನಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದ್ದು, ಕರ್ನಾಟಕದಲ್ಲಿ ಕ್ರಾಂತಿಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ಅವರು ಸೋಮವಾರ, ಉಡುಪಿ ನಗರದ ಎಮ್.ಜಿ.ಎಮ್ ಮೈದಾನದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಬೂತ್ ಮಟ್ಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ವಿದೇಶ ನೇರ ಹೂಡಿಕೆ ಕರ್ನಾಟಕ ದೇಶದಲ್ಲಿ ನಂ.1 ಸ್ಥಾನದಲ್ಲಿದೆ. ಬಾಹ್ಯಾಕಾಶ ಕ್ಷೇತ್ರದ ಪರಿಕರಗಳಲ್ಲಿ ಶೇ 25 ಉತ್ಪಾದನೆ ಕರ್ನಾಟಕದಲ್ಲಿಯೇ ಆಗುತ್ತಿದೆ. ರೈಲ್ವೆಯ ವಿದ್ಯುದೀಕರಣ ಶೇ 100ರಷ್ಟು ಪೂರ್ಣಗೊಂಡಿದೆ. ಈ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಮನೆಮನೆಗೆ ತಲುಪಿಸಬೇಕು ಎಂದರು
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಮಂತ್ರವನ್ನು ಅಕ್ಷರಶಃ ಜಾರಿಗೆ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬ್ರಿಟನ್ ಹಿಂದಿಕ್ಕಿದ ಭಾರತ
ಬರೋಬ್ಬರಿ 200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟನ್ ದೇಶವನ್ನೂ ಹಿಂದಿಕ್ಕಿ ಭಾರತ ಈಗ ದೇಶದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಶೇ 100ರಷ್ಟು ಕೊರೋನಾ ವ್ಯಾಕ್ಸಿನ್ ಹಾಕಿದ ವಿಶ್ವದ ಏಕೈಕ ದೇಶ ಭಾರತ, ಉಕ್ರೇನ್ ಮತ್ತು ರಷ್ಯಾ ಯುದ್ದದ ಸಂದರ್ಭದಲ್ಲಿ ರಷ್ಯಾದ ಪುಟಿನ್ ಮತ್ತು ಉಕ್ರೇನ್ ನ ಝಲೆಸ್ಕಿ ಜೊತೆ ನಿರಂತರ ಮಾತುಕತೆ ಕಡೆಸಿ, ಯುದ್ದಕ್ಕೆ ನಿಲ್ಲಿಸಿ, ಉಕ್ರೇನ್ ನಿಂದ 22,500 ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತಂದ ಏಕೈಕ ದೇಶ ಭಾರತ, ವಿಶ್ವದ ಬೇರೆ ಯಾವ ದೇಶವೂ ಈ ಸಾಧನೆಗಳನ್ನು ಮಾಡಿಲ್ಲ ಎಂದರು.
ಬೊಮ್ಮಾಯಿ ಅವರು ಎಸ್ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೇರಿಸಿದ್ದಾರೆ, ಎಸ್ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೇರಿಸಿದ್ದಾರೆ, ಸಿಎಂ ರೈತ ವಿದ್ಯಾನಿಧಿಯಡಿ 440 ಕೋಟಿ ರು. ವಿತರಿಸಿದ್ದಾರೆ, ಅದನ್ನು ಮೀನುಗಾರರಿಗೂ ವಿಸ್ತರಿಸಿದ್ದಾರೆ, ಲಿಂಗಾಯತ ಸಮುದಾಯವನ್ನು 2ಡಿ, ವಕ್ಕಲಿಗ ಸಮುದಾಯವನ್ನು 2 ಸಿ ವರ್ಗಕ್ಕೆ ಸೇರಿಸಿದ್ದಾರೆ ಎಂದವರು ಶ್ಲಾಘಿಸಿದರು.
ಶೇ 1ಕ್ಕಿಂತ ಕಡಿಮೆ ಬಡತನ
ದೇಶದಲ್ಲೀಗ ಕಡು ಬಡವರ ಸಂಖ್ಯೆ ಶೇ 1ಕ್ಕಿಂತ ಕಡಿಮೆಯಾಗಿದ್ದು, ಇದಕ್ಕೆ ಪಿಎಂ ಗರೀಬ್ ಅನ್ನ್ ಕಲ್ಯಾಣ ಯೋಜನೆಯೇ ಕಾರಣ ಎಂದು ಖುದ್ದು ಐಎಂಎಫ್ (ಇಂಟರ್ ನ್ಯಾಷನಲ್ ಮಾನಿಟರ್ ಫಂಡ್) ವರದಿ ಹೇಳಿದೆ. ಈ ದೇಶದಲ್ಲಿಂದು ಹಸಿವಿನಿಂದ ಯಾರೂ ಸಾಯುವ ಪರಿಸ್ಥಿತಿ ಇಲ್ಲ ಎಂದು ನಡ್ಡಾ ಹೇಳಿದರು.
2014 ರ ವೇಳೆಗೆ ಹೊರದೇಶದಿಂದ 92% ಮೊಬೈಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. 2023 ರ ವೇಳೆಗೆ 97% ಮೊಬೈಲ್ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಆ್ಯಪಲ್ ನ ನೂತನ ಮೊಬೈಲ್ ನಲ್ಲಿ ಮೇಡ್ ಇನ್ ಇಂಡಿಯಾ ಎಂದು ಬರೆಯಲಾಗಿದೆ. ಇದು ಎಲೆಕ್ಟ್ರಾನಿಕ್ ನಲ್ಲಿ ಭಾರತದ ಸಾಧನೆಯನ್ನು ತೋರಿಸುತ್ತದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅರುಣ್ ಸಿಂಗ್,
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಎಸ್. ಅಂಗಾರ, ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ರಾಷ್ಟ್ರೀಯ ಹಿಂ. ಮೋರ್ಚಾ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಜಿ.ಪ್ರ.ಕಾರ್ಯದರ್ಶಿ ಮನೋಹರ್ ಕಲ್ಮಾಡಿ ವಂದಿಸಿದರು. ಜಿ.ಪ್ರ.ಕಾರ್ಯದರ್ಶಿಗಳಾದ ನವೀನ್ ಹಾಗು ಸದಾನಂದ ನಿರೂಪಿಸಿದರು.