ಹೊಸದಿಗಂತ ಡಿಜಿಟಲ್ ಡೆಸ್ಕ್:
ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಾನಗರ ಪಾಲಿಕೆ ವಲಯ ಕಚೇರಿ-1ರ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಾಲಿಕೆ ಎಸ್.ಡಿ.ಎ. ವೈ.ಲಕ್ಕಪ್ಪ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು. ದಾವಣಗೆರೆ ಬೇತೂರು ರಸ್ತೆಯಲ್ಲಿರುವ ಇಮಾಂ ನಗರ ವಾಸಿ, ಹಿಟ್ಟಿನ ಗಿರಣಿ ಕೆಲಸದ ಬಿ.ಚಂದ್ರಶೇಖರ ಎಂಬುವರು ತಮ್ಮ ಹಿಟ್ಟಿನ ಗಿರಣಿ ಮನೆ, ವಾಸದ ಮನೆ ಮತ್ತು ಖಾಲಿ ಜಾಗದ ಅಳತೆ ತಿದ್ದುಪಡಿ ಹಾಗೂ ಇ-ಸ್ವತ್ತು ಮಾಡಿಸಲು ಮಹಾನಗರ ಪಾಲಿಕೆ ವಲಯ-1 ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಕೆಲಸ ಮಾಡಿಕೊಡಲು ಎಸ್.ಡಿ.ಎ. ಲಕ್ಕಪ್ಪ 15,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಚಂದ್ರಶೇಖರ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳ ತಂಡವು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಸ್ಡಿಎ ಲಕ್ಕಪ್ಪ ಹಾಗೂ 15 ಸಾವಿರ ಕಡಿಮೆಯಾಯಿತು, 25 ಸಾವಿರ ಕೊಡಬೇಕೆಂಬ ಬೇಡಿಕೆ ಇಟ್ಟ ಪ್ರಭಾರ ಕಂದಾಯ ಅಧಿಕಾರಿ ಅನ್ನಪೂರ್ಣ ಅವರುಗಳನ್ನು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದೆ.
ಲೋಕಾಯುಕ್ತ ಪೊಲೀಸ್ ಎಸ್ಪಿ ಎಂ.ಎಸ್.ಕೌಲಾಪೂರೆ, ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕಲಾವತಿ, ನಿರೀಕ್ಷಕರಾದ ಸಿ.ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ, ಪ್ರಭು ಬ.ಸೂರಿನ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.