ಹೊಸದಿಗಂತ ವರದಿ, ದಾವಣಗೆರೆ:
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕನನ್ನು ಅಮಾನತಿನಿಂದ ಬಿಡುಗಡೆಗೊಳಿಸಿ, ಮರು ನಿಯೋಜಿಸಲು 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಚನ್ನಗಿರಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜೀಪು ಚಾಲಕ ಸೋಮವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಜಿಲ್ಲೆಯ ಚನ್ನಗಿರಿ ತಾಪಂ ಇಓ ಜೀಪು ಚಾಲಕ ಶ್ಯಾಮಕುಮಾರ್ ಲೋಕಾಯುಕ್ತ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿ. ಚನ್ನಗಿರಿ ತಾಲೂಕು ಬೆಳ್ಳಿಗನೂಡು ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕನಾಗಿದ್ದ ಷಫೀವುಲ್ಲಾನನ್ನು ಕರ್ತವ್ಯಕ್ಕೆ ಗೈರು ಹಾಜರಿ, ದುರ್ನಡತೆ, ಕರ್ತವ್ಯ ಲೋಪದ ಕಾರಣದಿಂದ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತ್ತಿನಿಂದ ಬಿಡುಗಡೆಗೊಳಿಸಿ, ಕರ್ತವ್ಯಕ್ಕೆ ಮರು ನಿಯೋಜಿಸುವುದಕ್ಕಾಗಿ ತಾಪಂ ಇಓ ಜೀಪು ಚಾಲಕ ಶ್ಯಾಮಕುಮಾರ್ 50 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ಚನ್ನಗಿರಿ ತಾಪಂ ಕಚೇರಿಯಲ್ಲಿ ಆರೋಪಿ ಶ್ಯಾಮಕುಮಾರ್ 40 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗರು ದಾಳಿ ಮಾಡಿದ್ದು, ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.