ಹೊಸದಿಗಂತ ವರದಿ ಹಾವೇರಿ:
ಸರ್ಕಾರದಿಂದ ಮನೆಗೆ ಮಂಜೂರಾದ 5ಲಕ್ಷ ರೂ. ಹಣ ಬಿಡುಗಡೆಗೆ ಜಿಪಿಎಸ್ ಮಾಡಿಸಲು ಗ್ರಾಪಂ ಸದಸ್ಯನೋರ್ವ ಲಂಚಕ್ಕೆ ಬೇಡಿಕೆ ಇಟ್ಟು ಇದೀಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾನೆ. ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಕಾರಡಗಿ ಗ್ರಾಮ ಪಂಚಾಯತಿ ಸದಸ್ಯ ಮಹ್ಮದ್ ಜಾಫರ ಸಂಶಿ ಲೋಕಾಯುಕ್ತರ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಸದಸ್ಯ.
ಕಾರಡಗಿ ಗ್ರಾಮದ ದಾದಾಪೀರ ಮಹ್ಮದಗೌಸ ಲೋಹಾರ ಅವರಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ 5ಲಕ್ಷ ರೂ. ಸಹಾಯಧನ ಮಂಜೂರಾಗಿದ್ದು, ಆ ಮನೆಗೆ ಜಿಪಿಎಸ್ ಮಾಡಿಸಬೇಕಾಗಿತ್ತು. ಆದರೆ ಗ್ರಾಮ ಪಂಚಾಯತಿ ಸದಸ್ಯ ಮಹ್ಮದ ಜಾಫರ ಸಂಶಿ ಜಿಪಿಎಸ್ ಮಾಡಿಸಲು ರೂ.40ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಬೇಸತ್ತ ದಾದಾಪೀರ ಮಹ್ಮದಗೌಸ ಲೋಹಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಲಂಚದ ಮೊದಲ ಕಂತಿನ ಹಣ ಎಂದು 20 ಸಾವಿರ ರೂ. ಪಡೆಯುವ ವೇಳೆ ಜಾಫರ ಸಂಶಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ.
ದಾಳಿಯ ನೇತೃತ್ವವನ್ನು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ವಹಿಸಿದ್ದು, ತನಿಖಾಧಿಕಾರಿಗಳಾದ ಆಂಜನೇಯ ಎನ್.ಎಚ್., ಮುಸ್ತಾಕ್ ಅಹ್ಮದ್ ಶೇಖ್, ಮಂಜುನಾಥ ಪಂಡಿತ ಮತ್ತಿತರ ಅಧಿಕಾರಿಗಳು ಇದ್ದರು.