ಭಯೋತ್ಪಾದಕನ ಶವವನ್ನು ಹೊರತೆಗೆಯಲು ಬೇಡಿಕೆ: ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು ಮತ್ತು ಕಾಶ್ಮೀರದ ಹೈದರ್‌ಪುರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ಅಮೀರ್ ಮ್ಯಾಗ್ರೆ ಶವವನ್ನು ಹೊರತೆಗೆಯಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಅಮೀರ್ ತಂದೆ ಲತೀಫ್ ತಮ್ಮ ಮಗನ ಶವವನ್ನು ಔಪಚಾರಿಕ ಅಂತ್ಯಕ್ರಿಯೆಗಾಗಿ ಹೊರತೆಗೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಸೋಮವಾರ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಬಿಎಸ್ ಪರ್ದಿವಾಲಾ ಅವರ ಪೀಠವು ವಿಚಾರಣೆ ನಡೆಸಿ, ಮೃತ ದೇಹವು ನ್ಯಾಯದ ಹಿತಾಸಕ್ತಿಗಳನ್ನು ಪೂರೈಸಲಿದೆ ಎನ್ನುವ ಹಂತದಲ್ಲಿ ಮಾತ್ರವೇ ಇದನ್ನು ಪರಿಗಣಿಸಬಹುದು. ಆದರೆ, ಇದರಿಂದ ಅಂಥ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಮೀರ್‌ನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಆಡಳಿತವು ಸರಿಯಾಗಿ ನಡೆಸಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

ನಾವು ಅಮೀರ್ ತಂದೆಯ ಭಾವನೆಗಳನ್ನು ಗೌರವಿಸುತ್ತೇವೆ, ಆದರೆ ನ್ಯಾಯಾಲಯವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತದೆಯೇ ಹೊರತು ಭಾವನೆಗಳಿಂದಲ್ಲ. ಅಮೀರ್‌ನ ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ತಂದೆ ಲತೀಫ್ ಅವರಿಗೆ ಅವಕಾಶವಿದೆ ಎಂದು ಪೀಠ ಹೇಳಿದೆ.

2021ರ ನವೆಂಬರ್‌ 15 ರಂದು ನಡೆದ ಎನ್‌ಕೌಂಟರ್‌ನಲ್ಲಿ ಅಮೀರ್‌ ಸಾವು ಕಂಡಿದ್ದ. ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಹೈದರ್‌ಪುರದಲ್ಲಿ ದೊಡ್ಡ ಮಟ್ಟದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಅಂದು ಅಮಿರ್ ಜೊತೆಗೆ 3 ಸಹಚರರು ಸಾವು ಕಂಡಿದ್ದರು.
ನಾಲ್ವರನ್ನು ಶ್ರೀನಗರದಿಂದ 80 ಕಿಮೀ ದೂರದಲ್ಲಿರುವ ಹಂದ್ವಾರದಲ್ಲಿ ಪೊಲೀಸರು ಸಮಾಧಿ ಮಾಡಿದರು. ಅದೇ ಸಮಯದಲ್ಲಿ, ಎನ್‌ಕೌಂಟರ್ ನಂತರ, ಅಮೀರ್ ಕುಟುಂಬವು ಹೈಕೋರ್ಟ್‌ನ ಮೊರೆ ಹೋಗಿತ್ತು. ಭಯೋತ್ಪಾದಕರ ದೇಹವನ್ನು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲು ಸೇನೆ ನಿರಾಕರಿಸಿತ್ತು. ಕೊನೆಗೆ ವಡ್ಡರ್ ಪಯೀನ್ ಸ್ಮಶಾನದಲ್ಲಿ ಅಧಿಕಾರಿಗಳು ಶವವನ್ನು ಸಮಾಧಿ ಮಾಡಿದ್ದರು. ಅಮೀರ್ ಮ್ಯಾಗ್ರೆ ಉಗ್ರಗಾಮಿ ಎಂದು ಪೊಲೀಸರು ಹೇಳಿದರೆ, ಆತನ ಕುಟುಂಬವು ಆತ ನಿರಪರಾಧಿ ಎಂದು ಸಮರ್ಥಿಸಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!