ಹೊಸದಿಗಂತ ವರದಿ, ಹುಬ್ಬಳ್ಳಿ:
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಮಹತ್ತರ ಯೋಜನೆಯಾಗಿದೆ. ಕೆಲ ಪರಿಸರವಾದಿಗಳು ಮತ್ತು ಬೆಂಗಳೂರಿನ ವೃಕ್ಷಾ ಫೌಂಡೇಶನ್ ನವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ 19 ವರ್ಷದಿಂದ ಅಡ್ಡಗಾಲು ಹಾಕಿದ್ದಾರೆ ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ ಗಾಂವಕರ ಹೇಳಿದರು.
ಈ ರೈಲು ಮಾರ್ಗವಾದರೆ ಅಭಿವೃದ್ಧಿ ಪರ್ವವಾಗಲಿದೆ. ಆದರೆ ನ್ಯಾಯಾಲಯಕ್ಕೆ ಪಟ್ಟ ಬದ್ದ ಹಿತಾಸಕ್ತಿಗಳು ತಪ್ಪು ಮಾಹಿತಿ ನೀಡಿ ಜನರ ಮತ್ತು ನ್ಯಾಯಾಲಯದ ದಾರಿ ತಪ್ಪಿಸುತ್ತಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಯಿಂದ ವನ್ಯಜೀವಿ ಹಾಗೂ ಪರಿಸರಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ. ಹಾಗಾಗಿ ಈ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದರು.
ಈ ಯೋಜನೆ ತಡೆಗಟ್ಟಲು ಸಾರಿಗೆ, ಅರಣ್ಯ ಒತ್ತುವರಿದಾರರ ಲಾಬಿ ಪ್ರಬಲವಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಯೋಜನೆ ವಿಳಂಬವಾಗುತ್ತಿದೆ. ಆದರೆ ವಾಸ್ತವದಲ್ಲಿ ವನ್ಯಜೀವಿ ಹಾಗೂ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕೋರ್ಟ್ ಗೆ ಮನವರಿಕೆ ಮಾಡಿದಾಗ ಈ ಹಿಂದಿದ್ದ ತಡೆಯಾಜ್ಞೆ ತೆರವುಗೊಳಿಸಿ ಸ್ಥಳೀಯ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸೂಚಿಸಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಅಂಕೋಲಾ ಉದ್ದೇಶಿತ ರೈಲು ಮಾರ್ಗ ಯೋಜನೆ ಸ್ಥಳದಿಂದ ಹುಲಿ ಸಂರಕ್ಷಿತ ವಲಯ 14 ಕಿ.ಮೀ ದೂರವಿದೆ ಎಂಬುದನ್ನು ಅರಣ್ಯ ಇಲಾಖೆಯೇ ಒದಗಿಸಿರುವ ಮಾಹಿತಿ ಸ್ಪಷ್ಟಪಡಿಸುತ್ತದೆ. ಆದರೆ ವೃಕ್ಷ ಎನ್ ಜಿಓ ಕೋರ್ಟ್ ನಲ್ಲಿ 7 ರಿಂದ 8 ಕಿ.ಮೀ ದೂರವಿದೆ. ಇದು ವನ್ಯಜೀವಿ ಹಾಗೂ ಪರಿಸರದ ನಾಶವಾಗಲು ಕಾರಣವಾಗಲಿದೆ ಎಂದು ಕೋರ್ಟ್ ಮುಂದೆ ವಾದವನ್ನು ಮಂಡಿಸಿತ್ತು. ಇದನ್ನು ವರದಿ ಸಮೇತ ರೈಲ್ವೆ ಸೇವಾ ಸಮಿತಿಯಿಂದ ಕೋರ್ಟ್ ಗೆ ಮನವರಿಕೆ ಮಾಡಲಾಗಿದೆ ಎಂದರು. ಸಮಿತಿಯ ಉಪಾಧ್ಯಕ್ಷ ವೆಂಕಟರಾಮ್ ಬೊಮ್ಮಯ್ಯ ನಾಯಕ್, ಅಕ್ಷಯ ಕೊಲ್ಲೆ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ