ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬದ ವರ್ಷತೊಡಕನ್ನು ಜನರು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಮಾಂಸದೂಟದ ಹಬ್ಬವೆಂದೇ ಕರೆಯಲಾಗುವ ವರ್ಷತೊಡಕಿನಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಹಂದಿ ಕಳ್ಳತನಕ್ಕಿಳಿದಿದ್ದಾರೆ. ವಾರದಲ್ಲಿ 100ಕ್ಕೂ ಹೆಚ್ಚು ಹಂದಿಗಳನ್ನು ಕದಿಯುವ ಮೂಲಕ ಸಾಕಣೆದಾರರ ನಿದ್ದೆಗೆಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ನೂರು ಹಂದಿ ಕಳವಾಗಿದೆ. ಹಂದಿ ಶೆಡ್‌ಗಳಿಗೆ ನುಗ್ಗುವ ಕಳ್ಳರು ಟಾಟಾ ಏಸ್ ವಾಹನದಲ್ಲಿ ಕದ್ದೊಯ್ಯುತ್ತಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾರ್ಚ್ 21ರಂದು ದೇವನಹಳ್ಳಿ ತಾಲೂಕಿನ ಬನ್ನಿಮಂಗಲದಲ್ಲಿ ಹಂದಿ ಕಳವು ಮಾಡಲಾಗಿದೆ. ಗ್ರಾಮದ ಲೋಕೇಶ್ ಎಂಬವರಿಗೆ ಸೇರಿದ ಹಂದಿ ಶೆಡ್ಗೆ 6 ಜನರಿದ್ದ ತಂಡ ದಾಳಿ ಮಾಡಿದ್ದು, ಟಾಟಾ ಏಸ್ ವಾಹನದಲ್ಲಿ 49 ಹಂದಿಗಳನ್ನು ತುಂಬಿ ಪರಾರಿಯಾಗಿದ್ದಾರೆ.
ಮಾರ್ಚ್ 23ರಂದು ದೊಡ್ಡಬಳ್ಳಾಪುರದ ಬೈರಸಂದ್ರ ಗ್ರಾಮದಲ್ಲಿ ಕಳವು ಪ್ರಕರಣ ನಡೆದಿದ್ದು, ದಿವಾಕರ್ ಎಂಬವರಿಗೆ ಸೇರಿದ ಹಂದಿ ಶೆಡ್ಗೆ ನುಗ್ಗಿದ ಕಳ್ಳರು 32 ಹಂದಿಗಳನ್ನು ಕಳವು ಮಾಡಿದ್ದಾರೆ.ಮಾರ್ಚ್ 25ರ ಮುಂಜಾನೆ ಇದೇ ಶೆಡ್ಗೆ ನುಗ್ಗಿದ ಕಳ್ಳರು ಮತ್ತೆ 17 ಹಂದಿಗಳನ್ನು ಕಳವು ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.