October 16, 2026
Friday, October 16, 2026
spot_img

ಮೀಸಲಾತಿ ಮರುಪರಿಶೀಲನೆಗೆ ಆಗ್ರಹ: ಬಂಜಾರಾ ಸಮಾಜದ ಶಕ್ತಿ ಪ್ರದರ್ಶನ

ಹೊಸದಿಗಂತ ವರದಿ ಬೀದರ್:

ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರಾ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಶಾಸಕ ಪ್ರಭು ಬಿ. ಚವ್ಹಾಣ ನೇತೃತ್ವದಲ್ಲಿ ಬೀದರ್‌ನಲ್ಲಿ ಸೋಮವಾರ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರತಿಭಟನೆಗೂ ಮುನ್ನ ಭವಾನಿ ದೇವಿ ಹಾಗೂ ಸಂತ ಶ್ರೀ ಸೇವಾಲಾಲ ಮಹಾರಾಜರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಸಮಾಜದ ಮುಖಂಡರು, ಮಹಿಳೆಯರು ಮತ್ತು ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಮಾವೇಶದಲ್ಲಿ ಮಾತನಾಡಿದ ಪ್ರಭು ಚವ್ಹಾಣ, ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿ ಬಂಜಾರಾ, ಭೋವಿ, ಕೊರಮ ಹಾಗೂ ಕೊರಚ ಸಮಾಜಗಳ ಹಕ್ಕುಗಳನ್ನು ಕಸಿದಿದೆ ಎಂದು ಆರೋಪಿಸಿದರು. ಈಗಾಗಲೇ ಇದ್ದ ಮೀಸಲಾತಿಗೆ 59 ಜಾತಿಗಳನ್ನು ಸೇರಿಸಿರುವುದರಿಂದ ಮೂಲ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದರು.

ಇದನ್ನೂ ಓದಿ:

ಈ ಹೋರಾಟ ರಾಜಕೀಯಕ್ಕಲ್ಲ, ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿದೆ. ಸರ್ಕಾರ ತಕ್ಷಣ ನಿರ್ಧಾರ ಮರುಪರಿಶೀಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಡಾ. ಉಮೇಶ ಜಾಧವ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಬಂಜಾರಾ ಸಮಾಜದ ಹಕ್ಕಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಿದರು.

Must Read