Monday, December 4, 2023

Latest Posts

ಶಿವಮೊಗ್ಗ ಗಲಭೆ ಪ್ರಕರಣ ನಿಭಾಯಿಸದ ಡಾ.ಜಿ.ಪರಮೇಶ್ವರ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹ

ಹೊಸ ದಿಗಂತ ವರದಿ, ಮೈಸೂರು:

ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣ ತಡೆಯಲು ವಿಫಲರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಾಂಡ ಸಿ.ಕಾರ್ಯಪ್ಪ ಆಗ್ರಹಿಸಿದರು.

ಗುರುವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ವಿಶ್ವಹಿಂದೂಪರಿಷತ್ ಹಾಗೂ ಬಜರಂಗದಳದಿಂದ ಆಯೋಜಿಸಿದ್ದ ಶೌರ್ಯ ಜಾಗರಣ ರಥಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಶಿವಮೊಗ್ಗದಲ್ಲಿ ಒಂದು ಕೋಮಿನವರು ಔರಂಗಜೇಬಿನ ಕಟೌಟ್ ನಿಲ್ಲಿಸುವುದನ್ನು ಯಾಕೇ ಸರ್ಕಾರ ತಡೆಯಲಿಲ್ಲ. ಔರಂಗಜೇಬ ತನ್ನ ತಂದೆ, ತಾಯಿ, ಸಹೋದರರನ್ನೇ ಜೈಲಿಗೆ ಹಾಕಿದ್ದ. ಸಾವಿರಾರು ಹಿಂದುಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಸಂಪತ್ತು ಲೂಟಿ ಮಾಡಿದ್ದ, ಅಲ್ಲದೆ ಜನರನ್ನು ಮತಾಂತರಗೊಳಿಸುತ್ತಿದ್ದ. ಅಂತಹವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಆದರ್ಶವಾಗಿದ್ದಾನೆ. ಒಂದು ಕೋಮಿನವರು ಔರಂಗಜೇಬನನ್ನು ತಮ್ಮ ನಾಯಕನನ್ನಾಗಿ ಮುನ್ನಲೆಗೆ ತಂದು ಕತ್ತಿಗಳ ಹಿಡಿದು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಲ್ಲುಗಳನ್ನು ತೂರಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ, ಗೃಹ ಸಚಿವರು ಮಾತ್ರ ತಿಪ್ಪೆ ಸಾರಿಸುವ ಪ್ರಯತ್ನ ನಡೆಸುತ್ತಿರುವುದು ಅವರ ವೈಫಲ್ಯ ಎತ್ತಿ ತೋರಿಸುತ್ತಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜೀವಮಾನದಲ್ಲಿ ಕಾಂಗ್ರೆಸ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಬಿಜೆಪಿ ಸರ್ಕಾರ ಮಾತ್ರ ದಲಿತರನ್ನು ಸಿಎಂ ಮಾಡಲು ಸಾಧ್ಯ. ಬುಡಕಟ್ಟು ಜನಾಂಗದ ಮಹಿಳೆಯೊಬ್ಬರನ್ನು, ಅಬ್ದಲ್‌ಕಲಾಂರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದು , ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದರು.

ಸೆ.25ರಂದು ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಶೌರ್ಯ ಜಾಗರಣ ರಥಯಾತ್ರೆ ಸನಾತನ ಧರ್ಮ ರಕ್ಷಣೆ ಉದ್ದೇಶ ಹೊಂದಿದೆ. ಯುವ ಪೀಳಿಗೆಗೆ ಧರ್ಮ ರಕ್ಷಣೆಯಲ್ಲಿ ಬಲಿದಾನ ಹೊಂದಿದ ವೀರರ ಪರಿಚಯ ಮಾಡುವುದು ಯಾತ್ರೆಯ ಮೂಲ ಉದ್ದೇಶವಾಗಿದೆ. ಅ.15ರಂದು ಉಡುಪಿಯಲ್ಲಿ ಯಾತ್ರೆಯ ಸಂಚಾರ ಮುಕ್ತಾಯಗೊಂಡು ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!