ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಮೃಗಾಲಯವೊಂದು ಹುಲಿ ಮೂತ್ರ ಮಾರಾಟ ಮಾಡುವ ಮೂಲಕ ಸುದ್ದಿಯಲ್ಲಿದೆ. ಹೌದು, ಚೀನಾದ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದೆಯಂತೆ.
ಉಳುಕು, ಸ್ನಾಯು ನೋವು, ಸಂಧಿವಾತಕ್ಕೆ ಔಷಧಿಯೆಂದು ಹೇಳಿ 250 ಎಂ.ಎಲ್ ಹುಲಿ ಮೂತ್ರವನ್ನು ರೂ. 600 ಕ್ಕೆ ಮಾರಾಟ ಮಾಡುತ್ತಿದೆಯಂತೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ತಜ್ಞರು ಹುಲಿ ಮೂತ್ರದಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಯಾನ್ ಬಿಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯ 250 ಎಂ.ಎಲ್ ಸೈಬೀರಿಯನ್ ಹುಲಿ ಮೂತ್ರವನ್ನು ಸುಮಾರು 50 ಯುವಾನ್‌ಗೆ ಅಂದರೆ 600 ರೂ. ಗಳಿಗೆ ಮಾರಾಟ ಮಾಡುತ್ತಿದೆ. ಹುಲಿ ಮೂತ್ರ ತುಂಬಿದ ಬಾಟಲಿಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರವಾಸಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಚೀನಾದ ಸಿಚುವಾನ್ ಪ್ರಾಂತ್ಯದ ಮೃಗಾಲಯವೊಂದು ಸೈಬೀರಿಯನ್ ಹುಲಿ ಮೂತ್ರವನ್ನು ಬಾಟಲಿಗಳಲ್ಲಿ ಮಾರಾಟ ಮಾಡುತ್ತಿದೆ. ಹುಲಿ ಮೂತ್ರ ಸ್ನಾಯು ನೋವು, ದೀರ್ಘಕಾಲದ ಸಂಧಿವಾತ ಮತ್ತು ಉಳುಕುಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ನೋವಿರುವ ಜಾಗಕ್ಕೆ ಹುಲಿಯ ಮೂತ್ರವನ್ನು ವೈಟ್ ವೈನ್‌ನಲ್ಲಿ ಅದ್ದಿದ ಶುಂಠಿಯ ಸಹಾಯದಿಂದ ಲೇಪಿಸಿ ಎಂದು ಹುಲಿ ಮೂತ್ರ ಬಾಟಲಿಗಳ ಮೇಲೆ ಬರೆಯಲಾಗಿದೆ ಅಲ್ಲದೆ ಇದನ್ನು ಬೇಕಾದರೆ ಕುಡಿಯಲುಬಹುದು ಎಂದು ಮೃಗಾಲಯದಲ್ಲಿ ಈ ಔಷಧಿಯನ್ನು ತಯಾರಿಸಿದವರು ಹೇಳಿದ್ದಾರಂತೆ.