ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿ ನೀಡಲು ಆಗ್ರಹಿಸಿ ಅಹೋ ರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರ್ಪೋರೇಷನ್ ಮುಂದಿನ ರಸ್ತೆ ತಡೆದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ, ನ್ಯಾಯಾಲಯ ಆದೇಶ ಪಾಲಿಸದ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ರಮೇಶ ಕೌಜಗೇರಿ, ಮೀನಾಕ್ಷಿ ವಂಟಮೂರಿ, ಬೀರಪ್ಪ ಖಂಡೆಕರ, ಸಂತೋಷ ಚೌವ್ಹಾಣ, ಬಿಜೆಪಿ ಮುಖಂಡರಾದ ಶಿವಾನಂದ ಮುತ್ತಣ್ಣವರ, ರಂಗಾ ಬದ್ದಿ, ಅಶೋಕ ವಾಲ್ಮೀಕಿ, ರಾಜು ಕಾಳೆ ಇದ್ದರು.
ವಾಹನ ದಟ್ಟಣೆ: ಎರಡು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ದಟ್ಟಣೆಯಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು. ಬಳಿಕ ಪ್ರತಿಭಟನಾಕಾರರು ಪಾಲಿಕೆ ಆಯುಕ್ತರ ಕಚೇರಿಗೆ ತೆರಳಿ ಧರಣಿ ಮುಂದುವರಿಸಿದರು. ಪೊಲೀಸರು ಸಂಚರ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.