ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶನ ಹಬ್ಬಕ್ಕೆ ನಾಡೇ ಸಜ್ಜಾಗುತ್ತಿದ್ದು, ಈ ವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಹಾಗೂ ಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತ ಯಾವುದೇ ರೀತಿಯ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗು ಅವುಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ನಿಮಜ್ಜನೆ ಮಾಡುವುದನ್ನು ರಾಜ್ಯಾದ್ಯಂತ ಸಂಪೂರ್ಣವಾಗಿದೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಮುದ್ರ ಮತ್ತು ರಾಜ್ಯದ ನೀರಿನ ಇತರೆ ಮೂಲಗಳಾದ ನದಿ, ತೊರೆ, ಹಳ್ಳ, ಕಾಲುವೆ, ಬಾವಿ ಇವುಗಳು ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳ ಮಾರಾಟ ಹಾಗೂ ನಿಮಜ್ಜನೆಯನ್ನು ನಿಷೇಧಿಸಲಾಗಿದೆ.
ನಿಷೇಧ ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆಗಳು ಎಲ್ಲಾ ರೀತಿಯ ಸಹಕಾರ, ಸಹಭಾಗಿತ್ವ ಹಾಗು ಸೂಕ್ತ ರಕ್ಷಣೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಪರಿಸರ ಸಂರಕ್ಷಣಾ ಕಾಯಿದೆ, 1986ರ ಸೆಕ್ಷನ್ 5 ರಡಿಯ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ. ಆದೇಶ ಪಾಲನೆಯಾಗದಿದ್ದಲ್ಲಿ ಕೇಂದ್ರ ಸರ್ಕಾರದ ಪರಿಸರ (ಸಂರಕ್ಷಣೆ) ಕಾಯ್ದೆ, 1986ರಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಅಪರಾಧಕ್ಕೆ ದಂಡದೊಂದಿಗೆ ಕನಿಷ್ಠ ಒಂದೂವರೆ ವರ್ಷ ಹಾಗು ಗರಿಷ್ಠ ಆರು ವರ್ಷಗಳ ಕಾರಾಗೃಹ ವಾಸದ ಜೊತೆಗೆ ಉಲ್ಲಂಘನೆಗೆ ಪರಿಸರ (ಸಂರಕ್ಷಣೆ) ಕಾಯ್ದೆ, 1986 ರಡಿಯಲ್ಲಿಯೂ ಸಹ ಕ್ರಮ ಜರುಗಿಸಬಹುದಾಗಿದೆ. ಅಂತಹ ಉದ್ದಿಮೆ ಅಥವಾ ಉತ್ಪಾದನಾ ಘಟಕವನ್ನು ಪರಿಸರ (ಸಂರಕ್ಷಣೆ) ಕಾಯ್ದೆ, 1986 ಕಲಂ 5 ರಡಿಯಲ್ಲಿ ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಈ ಕಾಯ್ದೆಯ ಉಲ್ಲಂಘನೆ ಕಲಂ 15 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಗರಿಷ್ಠ ಒಂದು ಲಕ್ಷ ರೂಪಾಯಿಗಳ ದಂಡದೊಂದಿಗೆ ಗರಿಷ್ಠ 5 ವರ್ಷದ ಕಾರಾಗೃಹವಾಸದ ಅವಕಾಶವಿರುತ್ತದೆ.
ಪರಿಸರ ಸ್ನೇಹಿಯಾದ ಗಣಪತಿ ಮೂರ್ತಿ
ಶ್ರದ್ಧಾ, ಭಕ್ತಿ ಸಮರ್ಪಿಸಲು, ಪರಿಸರ ಸ್ನೇಹಿಯಾದ ಗಣಪತಿ ಮೂರ್ತಿಗಳ ಪೂಜೆಯೇ ಸೂಕ್ತ ಪದ್ಧತಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ವರ್ಚುವಲ್ ಸಭೆ ನಡೆಸಿದ ಸಚಿವರು, ನಮ್ಮ ಗಣೇಶ ಚತುರ್ಥಿಯ ವ್ರತಕಥೆಯಲ್ಲಿ ಮಣ್ಣಿನ ಗಣೇಶನನ್ನು ಪೂಜಿಸಬೇಕು. ನಂತರ ನೀರಿನಲ್ಲಿ ನಿಮಜ್ಜನೆ ಮಾಡಬೇಕು ಎಂಬ ಉಲ್ಲೇಖವಿದೆ. ಆದರೆ ಇಂದು ಪಿಒಪಿ ಗಣೇಶ ಮೂರ್ತಿಗಳನ್ನು ಪೂಜಿಸಿ, ನೀರಿನಲ್ಲಿ ನಿಮಜ್ಜನೆ ಮಾಡಿದರೆ, ಅದು ನೀರಲ್ಲಿ ಕರಗದೆ ವಿರೂಪವಾಗುತ್ತದೆ ಜೊತೆಗೆ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತದೆ, ಇದು ಭಗವಂತನಿಗೆ ನಾವು ಮಾಡಿದ ಅಪಚಾರವೂ ಆಗುತ್ತದೆ. ಹೀಗಾಗಿ ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸುವಂತೆ ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದರು.
ಪರಿಸರ ಪ್ರಕೃತಿ ಉಳಿಸಲು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್, ಪಿಒಪಿ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಪರಸ್ಪರ ಸಹಕಾರದಿಂದ ಕಾರ್ಯೋನ್ಮುಖವಾಗುವಂತೆ ಮತ್ತು ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಇದರ ಬಗ್ಗೆ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವಂತೆಯೂ ಸಚಿವರು ಸಲಹೆ ನೀಡಿದರು.