ಹೊಸದಿಗಂತ ವರದಿ,ಮಂಡ್ಯ :
ಕೃಷಿ ಇಲಾಖೆ ಅಧಿಕಾರಿಗಳ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕೃಷಿ ಸಚಿವರ ರಾಜೀನಾಮೆ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಮಾಡುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಆ. 11ರಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ತಿಳಿಸಿದರು.
ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರೂ ಆದ ಎನ್. ಚಲುವರಾಯಸ್ವಾಮಿ ಅವರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಪ್ರತಿ ತಾಲೂಕಿನ ಕೃಷಿ ಅಧಿಕಾರಿಗಳಿಂದ 6 ರಿಂದ 8 ಲಕ್ಷ ಲಂಚದ ಹಣವನ್ನು ಸಂಗ್ರಹ ಮಾಡಲು ಸೂಚಿಸಿದ್ದರ ವಿರುದ್ಧ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದು ನಮ್ಮ ಕುಟುಂಬ ಸಮೇತ ವಿಷ ಕುಡಿಯುತ್ತೇವೆ ಎಂದು ವಿವರಿಸಿದ್ದಾರೆ. ರಾಜ್ಯ ಸರ್ಕಾರದ ಇತಿಹಾಸದಲ್ಲೇ ಅಧಿಕಾರಿಗಳು ಸಚಿವರ ವಿರುದ್ದ ಪತ್ರ ಬರೆದಿರುವುದು ಲಜ್ಜೆಗೇಡಿತನದ ಸಂಗತಿಯಾಗಿದೆ. ಈ ಕೂಡಲೇ ಸಚಿವರು ಆರೋಪ ಮುಕ್ತರಾಗುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಗುತ್ತಿಗೆದಾರರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅಂದು ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಿದ್ದರು. ಓರ್ವ ಮಂತ್ರಿಯಾಗಿರುವ ಕಾರಣ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಚಲುವರಾಯಸ್ವಾಮಿ ಅವರು ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆವಿಗೂ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿವಿಲ್ ಕಾಮಗಾರಿಗಳನ್ನು ಮಾಡಿರುವ ಗುತ್ತಿಗೆದಾರರಿಂದ ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ 40ಪೆರ್ಸೆಂಟ್ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಪಕ್ಷ ಇಂದು ಅವರದ್ದೇ ಪಕ್ಷದ ಉಪ ಮುಖ್ಯಮಂತ್ರಿಗಳಿಂದ ಲಂಚದ ಬೇಡಿಕೆ ಬಂದಿದ್ದು, ಕರ್ನಾಟಕದಲ್ಲಿ ಮನೆ ಮಾತಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಮಂತ್ರಿಯಾಗಿರುವ ಚಲುವರಾಯಸ್ವಾಮಿಯವರೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲಾಗದು. ಇದರಿಂದ ಆಡಳಿತ ಸುವ್ಯವಸ್ಥೆ ಹದಗೆಡುತ್ತದೆ. ಚುನಾವಣೆಗೂ ಮುನ್ನ ಛೀಪ್ ಪಾಪುಲ್ಯಾರಿಟಿಗಾಗಿ ಮಾತನಾಡಿದ್ದೇವಷ್ಟೆ. ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೂ ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರ ತಿಣುಕಾಡುತ್ತಿದೆ ಎಂದು ಟೀಕಿಸಿದರು.
ಮುಂಬರುವ ಲೋಕಸಭಾ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ ಅಷ್ಟೆ. ನಂತರದ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂದು ಭವಿಷ್ಯ ನುಡಿದರು.
ಕೇಂದ್ರ ಸರ್ಕಾರ ಆಹಾರ ನಿಗಮದ ಗೋದಾಮಿನಲ್ಲಿ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಿರುತ್ತದೆ. ಅದನ್ನು ಪ್ರಕೃತಿ ವಿಕೋಪದಂತಹ ಪರಿಸ್ಥಿತಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಎಲ್ಲಾ ರಾಜ್ಯ ಸರ್ಕಾರಗಳು ಉಚಿತವಾಗಿ ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರೆ ಅಷ್ಟನ್ನೂ ಕೇಂದ್ರ ಸರ್ಕಾರವೇ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. 31ರೂ.ನಂತೆ ಮಾರಾಟ ಮಾಡುವಾಗ ಕರ್ನಾಟಕ ಸಹ ಅಲ್ಲಿ ಭಾಗವಹಿಸಿ ಖರೀದಿ ಮಾಡಬೇಕಿತ್ತು. ಅದು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಮುಖಂಡರಾದ ಡಾ. ಇಂದ್ರೇಶ್, ಶ್ರೀಧರ್, ಪಾ.ನ. ಸುರೇಶ್, ಬಸವರಾಜು ಇತರರು ಗೋಷ್ಠಿಯಲ್ಲಿದ್ದರು.