ಪ್ಯಾಲೇಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ಪೊಲೀಸರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಂಡಿದ್ದ ಪ್ಯಾಲೇಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನೀಡದ ಪೊಲೀಸರ ಕ್ರಮಕ್ಕೆ ಕಲಾವಿದರು, ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇರುವಾಗಲೂ ಅನುಮತಿ ದೊರೆಯದೇ ಇದ್ದದಕ್ಕೆ ಕಲಾವಿದರು ಬೇಸರ ವ್ಯಕ್ತಪಡಿಸಿ, ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ರಂಗಶಂಕರದಲ್ಲಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ಕಲಾವಿದ ರಮಣೀಕ್ ಸಿಂಗ್, ‘ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ’ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರ ನಡೆಯನ್ನು ಖಂಡಿಸಿ ಡಿಸೆಂಬರ್ 2 ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರರು ‘ಸದಾಗ್ರಹ’ ಎಂಬ ಹೆಸರಿನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದರು.

ಇದೀಗ ಈ ವಿಚಾರಕ್ಕೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಮದ್ಯ ಪ್ರವೇಶಿಸಿದ್ದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಕೆಲಸವನ್ನೂ ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಇಂತಹ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯವ ಕೆಲಸ ಮಾಡುವುದಿಲ್ಲ. ನಾವು ಸಂವಿಧಾನ ಮೂಲ ಸ್ಪೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಲ ಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿದೆ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು ನಾನು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆಗಳನ್ನು ನೀಡಿದ್ದೇನೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರ ಸದಾ ನಿಲ್ಲುತ್ತದೆ ಎಂಬುವುದನ್ನು ತಿಳಿಯಬಯಸುತ್ತೇನೆ. ಆದ್ದರಿಂದ ಯಾವುದೇ ಗೊಂದಲಗಳನ್ನು ಸೃಷ್ಟಿಸಬಾರದೆಂದು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತರಾಗಬಾರದೆಂದು ನಾಡ ಬಾಂಧವರಲ್ಲಿ ವಿನಂತಿಸುತ್ತೇನೆ’ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ರದ್ದಾಗಿದ್ದ ಕಾರ್ಯಕ್ರಮ
ರಂಗಶಂಕರದಲ್ಲಿ ನವೆಂಬರ್ 29 ಸಂಜೆ 5:30ಕ್ಕೆ ಕಾವ್ಯಗೋಷ್ಠಿ, ಕಿರು ನಾಟಕ ಸೇರಿದಂತೆ ಪ್ಯಾಲೇಸ್ತೀನ್‌ನಲ್ಲಿ ನಡೆಯುತ್ತಿರುವ ಮಾರಣಹೋಮ ಖಂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಲಾವಿದರಾದ ಎಂ.ಡಿ ಪಲ್ಲವಿ, ಶ್ವೇತಾಂಶು ಬೋರ, ರಮಣೀಕ್ ಸಿಂಗ್ ಇದರ ನೇತೃತ್ವ ವಹಿಸಿದ್ದರು. ಆದರೆ, ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆ ಕಾರ್ಯಕ್ರಮ ರದ್ದಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!