ಸದಾನಂದ ಗೌಡರಿಗೆ ಟಿಕೆಟ್ ನಿರಾಕರಣೆ: ಗೌಡ ಸಮಾಜ ಅಸಮಾಧಾನ

ಹೊಸದಿಗಂತ ವರದಿ, ಮಡಿಕೇರಿ:

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೆ ಬಿಜೆಪಿ, ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿದೆ. ಇದು ಖಂಡನೀಯ ಎಂದು ಕುಶಾಲನಗರ ಗೌಡ ಸಮಾಜದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪ್ರಮುಖ ಆನಂದ ಕರಂದ್ಲಾಜೆ ಅವರು, ಹಿಂದಿನ ಲೋಕಸಭೆಯಲ್ಲಿ ಅತ್ಯುತ್ತಮ ಸಂಸದೀಯ ಪಟು ಆಗಿದ್ದ ಪ್ರತಾಪ್ ಸಿಂಹ ಅವರಿಗೆ ಕೂಡಾ ಟಿಕೆಟ್ ನಿರಾಕರಿಸಲಾಗಿದೆ. ಇದು ಒಕ್ಕಲಿಗರನ್ನು ತುಳಿಯುವ ಸಂಕೇತವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಹೈಕಮಾಂಡ್ ತಕ್ಷಣ ಸದಾನಂದ ಗೌಡರಿಗೆ ಟಿಕೆಟ್ ಅಥವಾ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದಲ್ಲಿ ಕೊಡಗಿನ ಗೌಡ ಸಮಾಜಗಳು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆ ಕರೆದು ಒಕ್ಕಲಿಗರ ಹಿತ ಕಾಯದ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಆನಂದ ತಿಳಿಸಿದರು.

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ, ಕೊಡಗು- ಮೈಸೂರು ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಕಡೆಗಣಿಸಿರುವುದು ಸರಿಯಲ್ಲ. ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಕೊಡಗು ಜಿಲ್ಲೆಯ ಸಮುದಾಯ ಬಾಂಧವರಿಗೆ ಅತೀವ ಬೇಸರ ಉಂಟು ಮಾಡಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಮುದಾಯದ ಮಂದಿ ಸೇರಿದಂತೆ ಜಿಲ್ಲೆಯ ಮತದಾರರು ಸೂಕ್ತ ತೀರ್ಮಾನ ಕೈಗೊಳ್ಳುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಸಮಾಜದ ಉಪಾಧ್ಯಕ್ಷ ದೊರೆ ಗಣಪತಿ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕುಲ್ಲಚ್ಚನ ಹೇಮಂತ್ ಹಾಗೂ ದಬ್ಬಡ್ಕ ಡಾಟಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!