ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಸಹೋದರನ ಮೃತದೇಹವನ್ನು ತೊಡೆ ಮೇಲೆ ಮಲಗಿಸಿಕೊಂಡಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಮೊರೆನಾ ಬೀದಿಯಲ್ಲಿ ನಡೆದಿದೆ. ಮೃತ ಮಗುವಿನ ತಂದೆ ಪೂಜಾರಾಮ್ ಜಾತವ್ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ಗಾಗಿ ತೀವ್ರವಾಗಿ ಪ್ರಯತ್ನಿಸಿ ನಿಸ್ಸಾಹಯಕರಾಗಿ ಮನೆಗೆ ಹೋಗಿದ್ದಾರೆ. ಇತ್ತ ತನ್ನ ತಂದೆ ಬರುವಿಕೆಗಾಗಿ ತಮ್ಮನ ಮೃತದೇಹವನ್ನು ಹಿಡಿದು ಪುಟ್ಟ ಬಾಲಕ ಕಾದು ಕುಳಿತಿದ್ದಾನೆ. ಸ್ಥಳೀಯರು ಬಾಲಕನ ಬಳಿಗೆ ತೆರಳಿ ವಿಚಾರಿಸಿದಾಗಲೇ ಘಟನೆ ಬೆಳಕಿಗೆ ಬಂದಿದ್ದು. ಕೂಡಲೇ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸಹಾಯ ಮಾಡಿದ್ದಾರೆ.
ಮಧ್ಯಪ್ರದೇಶದ ಅಂಬಾಹ್ ರಾಜ್ಯದ ಬದ್ಫ್ರಾ ಗ್ರಾಮದ ಪೂಜಾರಾಮ್ ಜಾತವ್ಗೆ ಇಬ್ಬರು ಮಕ್ಕಳಿದ್ದು, ಎರಡನೇ ಮಗ ರಾಜುವಿಗೆ ತೀರಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ತುರ್ತು ಚಿಕಿತ್ಸೆ ಅಗತ್ಯವಿದ್ದರಿಂದ ಮೊರೆನಾ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಎರಡು ವರ್ಷದ ಕಂದಮ್ಮ ಅಸುನೀಗಿದೆ. ಬಡ ಮತ್ತು ಅಸಹಾಯಕ, ಪೂಜಾರಾಮ್ ಮಗನ ಮೃತ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಕ್ಯಾರೆ ಅಂದಿಲ್ಲ. ನಿಸ್ಸಹಾಯಕ ಸ್ಥಿತಿಯಲ್ಲಿ ಮೃತದೇಹವನ್ನು ನೋಡಿಕೊಳ್ಳುವಂತೆ ಪುಟ್ಟ ಬಾಲಕನಿಗೆ ಹೇಳಿ ಮನೆಗೆ ಹೊಂದಿರುಗಿದ್ದಾರೆ.
ತಂದೆಯ ಬರುವಿಕೆಗಾಗಿ ಮಡಿಲಲ್ಲಿ ತಮ್ಮನ ಮೃತದೇಹ ಮಲಗಿಸಿಕೊಂಡು ಈ ಪುಟ್ಟ ಬಾಲಕ ತಂದೆಗಾಗಿ ಎದುರು ನೋಡುತ್ತಿರುವ ದೃಶ್ಯ ಕರುಳು ಹಿಂಡುವಂತೆ ಮಾಡಿದೆ. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಮಾತನಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ನಾವು ಆಂಬುಲೆನ್ಸ್ ವ್ಯವಸ್ಥೆ ಮಾಡುವಷ್ಟರಲ್ಲಿ ಮಗುವಿನ ತಂದೆ ಹೊರಟುಹೋಗಿದ್ದರು ಎಂದು ಸಬೂಬು ಹೇಳಿದ್ದಾರೆ.