ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ದಂತ ವೈದ್ಯರ ಮನೆ ತಪಾಸಣೆ: ನಾಲ್ವರ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ದಂತ ವೈದ್ಯರೊಬ್ಬರ ಮನೆಗೆ ದಾಳಿ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಿಟ್ಟಂಗಾಲದ ಟೀನಾ ನಂಜಪ್ಪ (47), ಬೇತು ಗ್ರಾಮದ ಕಾರ್ಯಪ್ಪ (42), ಪೊನ್ನಂಪೇಟೆಯ ನೀತಾ ಮಿಳಿಂದ್(45) ಹಾಗೂ ದೇವನಹಳ್ಳಿಯ ಹರೀಶ್ (33) ಎಂದು ಗುರುತಿಸಲಾಗಿದೆ.

ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿಯಾದ ದಂತ ವೈದ್ಯ ದೇವರಗುಂಡ ಎಸ್.ಪ್ರವೀಣ್ ಅವರ ಮನೆಗೆ ನ.9ರ ಬೆಳಗ್ಗೆ 7.30ರ ಸುಮಾರಿಗೆ ಪ್ರವೇಶ ಮಾಡಿದ ಐದು ಮಂದಿ ಆರೋಪಿಗಳು, ತಾವು ಆದಾಯ ತೆರಿಗೆ ಅಧಿಕಾರಿಗಳಾಗಿದ್ದು, ನಿಮ್ಮ ಮನೆಗೆ ಆಂಬ್ಯುಲೆನ್ಸ್‌ನಲ್ಲಿ 200 ಕೋಟಿ ರೂ. ಹಣ ಬಂದಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಮನೆಯನ್ನು ಪರಿಶೀಲನೆ‌ ಮಾಡಬೇಕಿದ್ದು, ಮನೆಯ ಸದಸ್ಯರು ಒಂದೇ ಕಡೆ ಕುಳಿತುಕೊಳ್ಳಬೇಕು ಹಾಗೂ ಎಲ್ಲಾ‌ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಬೇಕು ಎಂದು ತಾಕೀತು ಮಾಡಿ ಬೆಳಗ್ಗೆ 8 45ರವರೆಗೂ ಹುಡುಕಾಟ ನಡೆಸಿದ್ದರೆನ್ನಲಾಗಿದೆ.

ಈ ಕುರಿತು ದೊರೆತ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್, ಕುಶಾಲನಗರ ನಗರ ಠಾಣಾಧಿಕಾರಿ ಗೀತಾ ಹಾಗೂ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ ಬಗಲಿ ಮತ್ತು ಸಿಬ್ಬಂದಿಗಳು ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಬುಧವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಾವುದೇ ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಬೇರೆ ಇಲಾಖೆ ಹೆಸರಿನ ಅಧಿಕಾರಿಗಳೆಂದು ಮನೆ ಅಥವಾ ಇತರೆ ಸ್ಥಳಗಳ ಪರಿಶೀಲನೆ ನಡೆಸುವುದು ಕಂಡುಂದಂಬಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲ್ಲವೇ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!