ಪುತ್ತೂರು ನಗರಸಭಾ ಅಧ್ಯಕ್ಷೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಪೊಲೀಸ್ ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತನೆಂದು ಹೇಳಿಕೊಂಡು ತಿರುಗಾಡುತ್ತಿರುವ ಅದ್ದು ಪಡೀಲ್ ಎಂಬವರು ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಪುತ್ತೂರು ಮಹಿಳಾ ಠಾಣೆ ಹಾಗೂ ಪುತ್ತೂರು ನಗರ ಠಾಣೆಗೆ ದೂರು ನೀಡಲು ಹೋದ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅವರನ್ನು ಪೊಲೀಸರು ಒಂದು ಗಂಟೆಗಳ ಕಾಲ ಠಾಣೆಯಲ್ಲೇ ಕುಳ್ಳಿರಿಸಿ ಸತಾಯಿಸಿ ಮನವಿಯನ್ನು ನಿರಾಕರಿಸಿದಾಗ ಬಿಜೆಪಿ ಪ್ರಮುಖರು ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಏಕಾಏಕಿ ಪುತ್ತೂರು ನಗರ ಠಾಣಾ ಮುಂಭಾಗ ಪ್ರತಿಭಟನೆ ಮಾಡಿದರು. ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಪುತ್ತೂರು ನಗರಠಾಣಾ ಇನ್ಸ್‍ಪೆಕ್ಟರ್ ಜಾನ್ಸನ್ ಡಿಸೋಜಾ, ಸರ್ಕಲ್ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ, ಎಎಸ್ಸೈ ಸೇಸಮ್ಮ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

`ಓರ್ವ ದಲಿತ ವರ್ಗಕ್ಕೆ ಸೇರಿದ ಮಹಿಳೆಯ ಬಗ್ಗೆ ಅದ್ದು ಪಡೀಲ್ ಎಂಬಾತ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ. ಇದರ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ನೀಡಲು ಬಂದ್ರೆ ಅವರನ್ನ ಸತಾಯಿಸುತ್ತೀರ’ ಇದೆಷ್ಟು ಸರಿ ಎಂದು ಸಂಜೀವ ಮಠಂದೂರು ಪ್ರಶ್ನೆ ಹಾಕಿದರು. ಈ ಕೂಡಲೇ ಅದ್ದು ಪಡೀಲ್ ವಿರುದ್ಧ ದೂರು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ದೂರು ದಾಖಲು ಮಾಡದಿದ್ದಲ್ಲಿ ಪೊಲೀಸ್ ಠಾಣೆಯಿಂದ ಹೋಗಲ್ಲ. ಎಲ್ಲರೂ ಇಲ್ಲೇ ಕೂತು ಪ್ರತಿಭಟಿಸುತ್ತೇವೆ ಎಂದು ಪಟ್ಟು ಹಿಡಿದ ಬಳಿಕ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಹಿಳೆ ಬಗ್ಗೆ ಅವಹೇಳಕಾರಿಯಾಗಿ ಬರೆದ ಅದ್ದು ಪಡೀಲ್ ವಿರುದ್ಧ ದೂರು ದಾಖಲು ಮಾಡಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ವಿರೂಪಾಕ್ಷ ಭಟ್, ಯುವ ಮೋರ್ಚ ನಿಕಟಪೂರ್ವ ಅಧ್ಯಕ್ಷ ಸಚಿನ್, ಜಿಲ್ಲಾ ಪ್ರಮುಖ್ ನಿತೇಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಯುವರಾಜ್ ಪೆರಿಯತ್ತೋಡಿ, ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಪುತ್ತೂರು ನಗರ ಮಹಿಳಾ ಮೋರ್ಚ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ನಗರಸಭೆ ಸದಸ್ಯೆ ದೀಕ್ಷಾ ಪೈ, ವಸಂತ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಘಟನೆ ಬಗ್ಗೆ ಮಾಧ್ಯಕ್ಕೆ ಹೇಳಿಕೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ವಿರುದ್ಧ ಓರ್ವ ಅದ್ದು ಪಡೀಲ್ ಎನ್ನುವಾತ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಹಾಕಿದ್ದಾನೆ. ಇವನನ್ನ ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು. ಓರ್ವ ಮಹಿಳೆ ಮೇಲೆ ಮತಾಂಧನೊಬ್ಬ ಈ ರೀತಿ ಅವಹೇಳನಕಾರಿ ಪೋಸ್ಟ್ ಹಾಕಿರುವುದು ಸರಿಯಲ್ಲ. ಈಗಾಗ್ಲೇ ನಾವು ಈ ಬಗ್ಗೆ ಜಿಲ್ಲಾ ಎಸ್‍ಪಿ ಗೆ ಮಾಹಿತಿ ನೀಡಿದ್ದು, ಬಳಿಕ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದೇವೆ. ಹಾಗೆಯೇ ಪೊಲೀಸರು ಕೂಡ ಅದ್ದು ಪಡೀಲ್ ಎಂಬಾತನನ್ನ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ 24 ಗಂಟೆಯ ಒಳಗಡೆ ಬಂಧಿಸಿದ್ದಲ್ಲಿ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಯಾರೀತಾ ಅದ್ದು ಪಡೀಲ್?
ಅದ್ದು ಪಡೀಲ್ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಕಾಂಗ್ರೆಸ್ ನ ಏಜೆಂಟ್ ಎಂಬಂತೆ ತಿರುಗಾಡುತ್ತಿದ್ದ. ಇದಾದ ಬಳಿಕ ಇದೀಗ ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತನೆಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇತ್ತೀಚೆಗೆ ಈತನದ್ದು ಎನ್ನಲಾದ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!