ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಎದುರು ಇರುವ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕಿಡಿಗೇಡಿಗಳು ಭಾವಚಿತ್ರಕ್ಕೆ ಸುಟ್ಟಿರುವ ರೀತಿಯಲ್ಲಿ ಅಪಮಾನ ಮಾಡಿರುತ್ತಾರೆ,ಈ ಕೃತ್ಯಕ್ಕೆ ಕಾರಣರಾದವರನ್ನು ಪೊಲೀಸ್ ಇಲಾಖೆ ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಗಡೀಪಾರು ಮಾಡಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಘಟನೆಯಿಂದ ವೀರಶೈವ ಲಿಂಗಾಯತ ಸಮಾಜದ ಬಂಧುಗಳಿಗೆ, ಬಸವಾಭಿಮಾನಿಗಳಿಗೆ ತುಂಬಾ ನೋವಾಗಿದೆ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ,ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.