ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಂಗಲ್ ಚಂಡಮಾರುತದ ಪರಿಣಾಮ ನಗರದಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಇದರ ನಡುವಲ್ಲೂ ಬೆಂಗಳೂರು ನಗರ ಜಿಲ್ಲಾಡಳಿತ ಮಂಡಳಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದೆ ಇರುವುದು ಪೋಷಕರಲ್ಲಿ ಬೇಸರ ತರಿಸಿದೆ.
ಖಾಸಗಿ ಶಾಲೆಗಳ ಸಂಘ ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ರಜೆ ಕೇಳುವುದು ಕೆಲ ಪೋಷಕರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಹೇಳಿದೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಕೆಲವು ವರ್ಗದ ಪೋಷಕರು ಮಾತ್ರ ರಜೆಗೆ ಒತ್ತಾಯಿಸುತ್ತಿದ್ದಾರೆ. ಮಳೆ ನಿಯಂತ್ರಣ ತಪ್ಪಿದರೆ ಸರ್ಕಾರವೇ ರಜೆ ಘೋಷಿಸುತ್ತದೆ. ಆದರೆ. ಕೆಲವು ಪೋಷಕರು ತುಂತುರು ಮಳೆಯಾದರೂ ಚಿಂತಿತರಾಗಿ, ರಜೆಗೆ ಒತ್ತಾಯಿಸುತ್ತಿದ್ದಾರೆಂದು ಹೇಳಿದ್ದಾರೆ.
ರಜೆಯ ಕಾರಣ ಶಾಲೆಗಳು ಈಗಾಗಲೇ ಪಠ್ಯಕ್ರಮವನ್ನು ಪೂರ್ಣಗೊಳಿಸುವಲ್ಲಿ ಹಿಂದುಳಿದಿವೆ. ಪ್ರತಿ ಬಾರಿ ಮಳೆ ಬಂದಾಗಲೂ ರಜೆ ಘೋಷಿಸಬೇಕಾದರೆ ಇಡೀ ಮಳೆಗಾಲವನ್ನು ರಜೆ ಎಂದು ಘೋಷಿಸಬೇಕಾಗುತ್ತದೆ. ಪ್ರವಾಹಕ್ಕೆ ತುತ್ತಾಗುವ ತಗ್ಗು ಪ್ರದೇಶಗಳಲ್ಲಿರುವ ಶಾಲೆಗಳಿಗೆ ರಜೆ ಘೋಷಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು. ಪ್ರತಿ ಬಾರಿ ಮಳೆ ಬಂದಾಗ ರಜೆ ಕೇಳುವ ಮನೋಭಾವ ನಿಲ್ಲಬೇಕು ಎಂದು ತಿಳಿಸಿದ್ದಾರೆ.