ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆಯ ಆರೋಪಿ ದರ್ಶನ್ ಐದು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದೀಗ ಜಾಮೀನು ಅರ್ಜಿ ಹೈಕೋರ್ಟ್ಗೆ ಬಂದಿದ್ದು, ಅಕ್ಟೋಬರ್ 28ಕ್ಕೆ ವಿಚಾರಣೆ ನಿಗದಿಯಾಗಿದೆ. ದರ್ಶನ್ ಕೊಲೆ ಆರೋಪದ ಮೇಲೆ ಅರೆಸ್ಟ್ ಆದ ನಂತರ ಕೆಲ ನಿರ್ಮಾಪಕರು ದರ್ಶನ್ ಅವರ ಹಳೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ದರ್ಶನ್ ಜೈಲಿಗೆ ಹೋದ ನಂತರ ಅವರ ಮುಖ್ಯ ಭೂಮಿಕೆಯಲ್ಲಿದ್ದ ‘ಮೆಜೆಸ್ಟಿಕ್’, ‘ಶಾಸ್ತ್ರಿ’ ಸೇರಿದಂತೆ ಹಲವು ಚಿತ್ರಗಳು ಮರು ಬಿಡುಗಡೆಯಾದವು. ದರ್ಶನ್ ಅಭಿನಯದ ‘ನವಗ್ರಹ’ ಮತ್ತು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರಗಳು ಮರು ಬಿಡುಗಡೆ ಆಗಲಿವೆ ಎಂದು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಎರಡೂ ಚಿತ್ರಗಳನ್ನು ಒಂದೇ ದಿನ ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈ ವಿಷಯ ಅಭಿಮಾನಿಗಳನ್ನು ಕೆರಳಿಸಿದೆ. ಆದರೆ, ಇದೀಗ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ.
ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ‘ನವಗ್ರಹ’ ನವೆಂಬರ್ 8 ರಂದು ಮತ್ತೆ ಬಿಡುಗಡೆಯಾಗಲಿದೆ. ಮತ್ತೊಂದು ಅದ್ಭುತ ಚಿತ್ರ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಮತ್ತು ಈ ಚಿತ್ರವು ನವೆಂಬರ್ 22 ರಂದು ಮತ್ತೆ ಬಿಡುಗಡೆಯಾಗಲಿದೆ.
ಮೊದಲಿಗೆ ಎರಡೂ ಸಿನಿಮಾಗಳು ನವೆಂಬರ್ 08 ರಂದೇ ಬಿಡುಗಡೆ ಆಗಲಿದ್ದವು. ಆದರೆ, ಒಂದೇ ದಿನ ಎರಡು ಚಿತ್ರಗಳ ಮರು ಬಿಡುಗಡೆಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಭಿಮಾನಿಗಳ ಮನವಿಯಿಂದಾಗಿ ದಿನಾಂಕವನ್ನು ಬದಲಾಯಿಸಲಾಗಿದೆ.