Tuesday, March 28, 2023

Latest Posts

ಯುವ ಕಾಂಕ್ಲೇವ್-2023: ಪಾಶ್ಚಾತ್ಯ ವ್ಯಾಮೋಹ ವಿನಾಶದ ಹಾದಿ-ಪ್ರಕಾಶ್ ಬೆಳವಾಡಿ

ಹೊಸದಿಗಂತ ವರದಿ ಬೆಳಗಾವಿ:

ಬಡತನ, ಜಾತಿ ಸಮಸ್ಯೆಗಳಲ್ಲ ಬದಲಾಗಿ ಅವುಗಳ ಆಧಾರದ ಮೇಲೆ ನಡೆಯುವ ತಾರತಮ್ಯಗಳು ಸಮಸ್ಯೆಗಳಾಗಿವೆ ಎಂದು ಖ್ಯಾತ ನಟ, ಪತ್ರಕರ್ತ ಪ್ರಕಾಶ್ ಬೆಳವಾಡಿ ಹೇಳಿದರು. ನಗರದ ಕೆಎಲ್‌ಎಸ್ ಗೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಯುವ-೨೦೨೩ ಸಮ್ಮೇಳನದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹೊಸ ರಾಷ್ಟ್ರೀಯತೆ ಎಂದರೆ ಹೊಸ ಆಲೋಚನೆಗಳದ್ದಾಗಿದೆ. ನಾವು ಯಾರೆಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ ನಮ್ಮ ಗುರುತು ಗ್ರಹಿಸಲು ಸಾಧ್ಯ. ಪಾಶ್ಚಾತ್ಯರ ವಸಹಾತುಶಾಹಿ ಕಾರ್ಯ ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ನಮ್ಮ ಸಂಸ್ಕೃತಿ, ಭಾಷೆಗಳನ್ನು ಪಾಶ್ಚಾತ್ಯರು ಕಡೆಗಣಿಸಿದ್ದಾರೆ. ಇದರಿಂದಾಗಿ ನಮ್ಮ ಸ್ವಂತಿಕೆಯ ಬಗ್ಗೆ ನಾವೇ ಅಸೂಯೆ ಪಡುವಂತಾಯಿತು, ನಮ್ಮ ಭಾಷೆಗಳನ್ನು ಬಳಸಲು ನಾವೇ ಹಿಂಜರಿದೆವು.

ಹಿಂದಿನ ಯುವ ಪೀಳಿಗೆ ಹಾಗೂ ಪ್ರಸ್ತುತ ಯುವ ಪೀಳಿಗೆಯಲ್ಲಿ ಆಲೋಚನೆಯ ಶೈಲಿ ಬದಲಾಗಿದೆ. ಸಾಕಷ್ಟು ಬದಲಾವಣೆಗಳು ರಾಷ್ಟ್ರವ್ಯಾಪಿ ನಡೆಯುತ್ತವೆ. ಪಾಶ್ಚಾತ್ಯದ ಅನುಕರಣೆ ಪ್ರತಿಷ್ಠೆಯಾಗಬಾರದು. ನಾಗರಿಕ ಪ್ರಜ್ಞೆ ನಮಗೆ ಅರಿವಾಗಬೇಕು.

’ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ ಕೂಡಿ ಬಾಳಬೇಕೆಯೆ ಹೊರತು ಪ್ರತ್ಯೇಕತೆಗೆ ಯಾವುದೇ ಅರ್ಥವಿಲ್ಲ. ಈಗಲೂ ಯುವಪೀಳಿಗೆ ಎಚ್ಚೆತ್ತುಕೊಳ್ಳದೇ ಪಾಶ್ಚಾತ್ಯದ ವ್ಯಾಮೋಹದ ಕಡೆ ಸಾಗಿದರೆ ಅದು ನಮ್ಮ ವಿನಾಶದ ಹಾದಿ ಎಂದು ಹೇಳಿದರು.

ನವಯುಗದ ರಾಜಕೀಯ, ದೇಶಾಭಿಮಾನದ ಕುರಿತು ಭಾಜಪ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ ಪಾಸ್ವಾನ್ ಮಾತನಾಡಿ, ಸಾಮಾಜಿಕ ನ್ಯಾಯ ಎಂದು ಮಾತನಾಡುವ ಜನ ಅದರಂತೆ ನಡೆದುಕೊಳ್ಳುತ್ತಿಲ್ಲ. ಆದರೆ ಬದಲಾದ ಭಾರತದಲ್ಲಿ ವನವಾಸಿಯ ಮಹಿಳೆ ರಾಷ್ಟ್ರಪತಿಯಾಗಿದ್ದಾರೆ, ಹಿಂದುಳಿದ ವರ್ಗದ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾರೆ. ಭಾರತದ ದೃಷ್ಟಿಕೋನ ವಿಶಾಲವಾಗಿದೆ. ಕೊರೋನಾ ಲಸಿಕೆ ರಫ್ತು, ರಷ್ಯಾ-ಉಕ್ರೇನ್ ಯುದ್ಧದ ಸಂದಿಗ್ಧತೆಯಲ್ಲಿ ಭಾರತೀಯರ ರಕ್ಷಣೆ ಇತ್ಯಾದಿಗಳು ನವಭಾರತದ ಸಾಧನೆಗಳಾಗಿವೆ.

ದೇಶದಲ್ಲಿ ಆದ ಇತ್ತೀಚಿನ ಬದಲಾವಣೆಗಳು ಮೂಲಹಂತದಲ್ಲಿ ಆಗಿವೆ. ರಕ್ಷಣೆ ದೃಷ್ಟಿಯಿಂದ ನಾವು ಮೊದಲಿಗಿಂತ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದೇವೆ. ಜನ ಧನ ಯೋಜನೆ ಭಾರತದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಎಲ್ಲರಿಗೂ ಸಮಾನ ಅವಕಾಶ, ನ್ಯಾಯ ಎಂದವರೆಲ್ಲ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತರಾದರು.

ಈಗಲೂ ರಾಜಕೀಯ ಲಾಭಕ್ಕಾಗಿ ಒಡೆದು ಆಳುವ ನೀತಿ ಹೊಂದಿದವರು ಜಾತಿ ಆಧಾರದ ಮೇಲೆ ವೈಷಮ್ಯ ಹರಡುತ್ತಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಅಸಂಖ್ಯಾತ ಸ್ವರಾಜ್ಯ ಕಲಿಗಳ ತ್ಯಾಗ, ಬಲಿದಾನ ತಿಳಿದು ಬಂದಿದೆ. ಇದಕ್ಕೂ ಪೂರ್ವದಲ್ಲಿ ಸ್ವಾತಂತ್ರ್ಯ ಕೇವಲ ಒಂದು ಪಕ್ಷ, ಒಂದು ಕುಟುಂಬದಿಂದ ಲಭಿಸಿತು ಎಂಬು ಬಿಂಬಿಸಲಾಗಿತ್ತು. ತುಷ್ಟಿಕರಣದಿಂದ ತೃಪ್ತಿಕರಣದವರೆಗೆ ಆದ ಈ ಎಲ್ಲ ಬದಲಾವಣೆಗಳನ್ನು ಯುವಪೀಳಿಗೆ ಕುಲಂಕುಶವಾಗಿ ಅಧ್ಯಯಿಸಬೇಕು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!