ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ನಿಮಿತ್ತ ದೇವ ದರ್ಶನ ಪಾತ್ರಿಗಳೂ , ಹೊಸದಿಗಂತದ ಮಾಜಿ ಸಂಪಾದಕರಾಗಿದ್ದ ವಸಂತ ನಾಯಕ್ ಫಲಿಮಾರ್ಕರ್ (77) ಅವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಮೂಲ್ಕಿಯಲ್ಲಿ ನಿಧನ ಹೊಂದಿದರು. ಅವರು ಪತ್ನಿ , ಓರ್ವ ಮಗ ಹಾಗೂ ಮಗಳನ್ನು ಅಗಲಿದ್ದಾರೆ.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಂಶ ಪಾರಂಪರ್ಯವಾಗಿ ಬಂದಿರುವ ಶ್ರೀ ಕಾಲಭೈರವ ದರ್ಶನ ಪಾತ್ರಿಯಾಗಿ 30 ವರ್ಷಗಳ ಕಾಲ ಸೇವೆ ನೀಡಿ ಬಳಿಕ ನಿವೃತ್ತಿ ಪಡೆದಿದ್ದರು.
ಉತ್ತಮ ವಾಗ್ಮಿಯಾಗಿ ವಿಶ್ವ ಹಿಂದೂ ಪರಿಷತ್. ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಕಾಂಗ್ರೆಸ್ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಬರ್ಬರತೆಗಳ ವಿರುದ್ಧ ಜನಸಂಘಟನಾ ಕಾರ್ಯದೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಹೊಸದಿಗಂತ ಸಂಪಾದಕರಾಗಿದ್ದರು
ನಾಯಕ್ ಫಲಿಮಾರ್ಕರ್ ಹೆಸರಿನಲ್ಲಿ ಇವರು ಬರೆಯುತ್ತಿದ್ದ ಕ್ರಿಕೆಟ್ ಕ್ರೀಡಾ ಅಂಕಣಗಳು ಇವರಿಗೆ ಬಹಳ ಪ್ರಸಿದ್ಧಿ ತಂದುಕೊಟ್ಟಿತ್ತು. ಪತ್ರಕರ್ತರಾಗಿ, ಭಾಷಣಕಾರರಾಗಿ, ಸಾಹಿತ್ಯಾಭಿಮಾನಿಯಾಗಿದ್ದರು. ‘ಹೊಸದಿಗಂತ’ ಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಅವರ ತೀರ್ಥರೂಪರ ಮರಣದಿಂದ ತೆರವಾದ ಕಾಲಭೈರವ ದೇವದರ್ಶನ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗಿ ಬಂದಿತ್ತು. ಇದಕ್ಕೂ ಮುನ್ನ ಅವರು ‘ಉದಯವಾಣಿ’ಯ ಕ್ರೀಡಾ ವಿಭಾಗದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರಲ್ಲದೆ ಪ್ರಮುಖ ಆಂಗ್ಲ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಖ್ಯಾತರಾಗಿದ್ದರು.
ಹೊಸದಿಗಂತ ಬಳಗ ಸಂತಾಪ
ಒಬ್ಬ ಶ್ರೇಷ್ಠ ಪತ್ರಕರ್ತರಾಗಿದ್ದ ವಸಂತ ನಾಯಕ್ ಪಲಿಮಾರ್ಕರ್ ಅವರು ‘ಹೊಸದಿಗಂತ ’ಸಂಪಾದಕರಾಗಿ ಸಲ್ಲಿಸಿದ ಸೇವೆಯು ಅನನ್ಯವೆಂಬುದಾಗಿ ತಿಳಿಸಿರುವ ಹೊಸದಿಗಂತ ಆಡಳಿತ ಮಂಡಳಿಯು ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂಬುದಾಗಿ ಹೊಸದಿಗಂತ ಬಳಗ ಪ್ರಾರ್ಥಿಸುತ್ತದೆ.