ದೇವರಪುರ ಹೆದ್ದಾರಿ ದರೋಡೆ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇರಳ ಮೂಲದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯ ತಲಚೇರಿ ಮೂಲದ ಶಾಲಿನ್ (30) ಟಿ.ಶ್ರೀಜಿತ್ (38) ವೈಷ್ಣವ್.ಕೆ(27) ಬಂಧಿತ ಆರೋಪಿಗಳಾಗಿದ್ದು, ಇದರೊಂದಿಗೆ ಈ ಪ್ರಕರಣದ ಒಟ್ಟು 11 ಆರೋಪಿಗಳನ್ನು ಬಂಧಿಸಿದಂತಾಗಿದೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆ ನಿವಾಸಿ ಶಬ್ದಾದ್ ಅವರು ಕಳೆದ ಡಿ.8ರಂದು‌ ಕೇರಳ ರಾಜ್ಯದಿಂದ ಹೆಚ್ಆರ್-26 ಸಿಎಲ್-5200ರ ಕಾರಿನಲ್ಲಿ ತೆರಳಿ, ಮೈಸೂರು ನಗರದ ಆಶೋಕಪುರ ರಸ್ತೆಯಲ್ಲಿರುವ ಯೋಗೇಶ್ ಎಂಬವರ ಜ್ಯುವೆಲರಿ ಅಂಗಡಿಯಲ್ಲಿ 750 ಗ್ರಾಂ. ಚಿನ್ನವನ್ನು ಮಾರಾಟ ಮಾಡಿ 50 ಲಕ್ಷ ರೂ.ಗಳನ್ನು ಪಡೆದುಕೊಂಡು ಕೇರಳ ರಾಜ್ಯಕ್ಕೆ ತೆರಳುತ್ತಿದ್ದರು.

ಡಿ.9ರ ಬೆಳಗಿನ ಜಾವ 2ಗಂಟೆಗೆ ಕೊಡಗಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಒಂದು ಪಿಕ್‌ಅಪ್ ವಾಹನನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ 10-15 ಜನರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಶಬ್ದಾದ್ ಹಾಗೂ ಅಪ್ಪು ಎಂಬವರ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಕಾರನ್ನು ಮತ್ತು ಕಾರಿನಲ್ಲಿದ್ದ 50 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಲಾಗಿತ್ತು. ಮತ್ತು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಪರ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಡಿವೈಎಸ್ಪಿ ಆರ್. ಮೋಹನ್ ಕುಮಾರ್ ಅವರ ಉಸ್ತುವಾರಿಯಲ್ಲಿ ಉಪವಿಭಾಗ ಮಟ್ಟದ ಅಧಿಕಾರಿ,ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ತನಿಖೆ ಕೈಗೊಂಡು ಈಗಾಗಲೇ ದರೋಡೆ ಪ್ರಕರಣದ 8 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.

ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧನಕ್ಕೊಳಗಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಒಟ್ಡು 8 ಲಕ್ಷ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಲಾದ 30 ಲಕ್ಷ ರೂಪಾಯಿ ಮೌಲ್ಯದ ಒಟ್ಟು ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮರಾಜನ್ ವಿವರಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತೆ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ಒಟ್ಟು 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!