ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೋ ಲಭ್ಯವಾಗಿದ್ದು,ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಬಯಲಾಗಿದ್ದು, ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟಕ್ಕೂ, ದೇವೇಗೌಡ ಅವರು ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ’ ಎಂಬುದಾಗಿ ಶಿವರಾಮೇಗೌಡ ಹೇಳಿದ್ದಾರೆ.
‘ನೀವು ಡಿ.ಕೆ.ಶಿವಕುಮಾರ್ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್ಅನ್ನು ಎನ್ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೀವು ಯಾವುದಕ್ಕೂ ಹೆದರಬೇಡಿ. ನಿಮಗೆ ಏನು ಹೆಲ್ಪ್ ಬೇಕೋ ಅದನ್ನು ಡಿಕೆಶಿ ಮಾಡುತ್ತಾರೆ’ ಎಂಬುದಾಗಿ ಶಿವರಾಮೇಗೌಡ ಭರವಸೆ ನೀಡಿರುವುದು ಆಡಿಯೊದಲ್ಲಿದೆ.
ಈ ವೇಳೆ ಉತ್ತರಿಸಿದ ದೇವರಾಜೇಗೌಡ, “ಅಣ್ಣ ಇದು ಹೆಣ್ಣುಮಕ್ಕಳ ಮಾನ ಮರ್ಯಾದೆ ಪ್ರಶ್ನೆ ಅಲ್ಲವೇ? ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ. ಅದಕ್ಕೆ ಶಿವರಾಮೇಗೌಡ, “ನಿನಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತಾರೆ. ಅಷ್ಟಕ್ಕೂ, ನೀನೇನೂ ಹಾಸನದಲ್ಲಿ ಪೆನ್ಡ್ರೈವ್ ಹಂಚಿಲ್ಲ. ಹಂಚಿದರೂ ಅದರಲ್ಲಿ ತಪ್ಪೇನಿಲ್ಲ. ನೀನೊಬ್ಬ ವಕೀಲನಾಗಿ ಹೀಗೆ ಹೆದರಿದರೆ ಹೇಗೆ? ಏನೂ ಆಗುವುದಿಲ್ಲ. ಯಾವ ವಿಡಿಯೊ ಇದೆ ನಮಗೆ ಕೊಡು” ಎಂದಿದ್ದಾರೆ.
‘ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಬಿಟ್ಟಿದ್ದಾರೆ ಎಂಬುದಾಗಿ ಹೇಳು. ಆ ದೇವೇಗೌಡರ ಮಕ್ಕಳು ಏನೂ ಕಡಿಮೆ ಇಲ್ಲ. ದೇವೇಗೌಡರು ಇಷ್ಟಾದರೂ ಆತ್ಮಹತ್ಯೆ ಮಾಡಕೊಂಡಿಲ್ಲವಲ್ಲ. ಪ್ರಜ್ವಲ್ ರೇವಣ್ಣ ಬೆಳೆಯುತ್ತಿದ್ದಾನೆ. ಕುಮಾರಸ್ವಾಮಿ ಅವರಿಗೆ ತಮ್ಮ ಮಗ ಮುಂದೆ ಬರಬೇಕು ಎಂಬ ಆಸೆ ಇದೆ. ಹಾಗಾಗಿ, ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಹಂಚಿದ್ದಾರೆ ಎಂಬುದಾಗಿ ಹೇಳಿ’ ಎಂದು ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ. ಇದು ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.