ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ಪ್ರತಿಪಕ್ಷಗಳು ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿವೆ.
ಇತ್ತ ಸಚಿವ ಅಶ್ವಿನಿ ವೈಷ್ಣವ್ ಹಗಲು ರಾತ್ರಿ ಎನ್ನದೇ ದುರ್ಘಟನೆ ನಡೆದ ಸ್ಥಳದಲ್ಲಿಯೇ ಬೀಡುಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆಯೂ ಸಾಕಷ್ಟು ರೈಲ್ವೆ ದುರಂತ ಸಂಭವಿಸಿದ್ದು, ಯಾವ ಸಚಿವರೂ ಅಶ್ವಿನಿ ವೈಷ್ಣವ್ ರೀತಿ ಕಾರ್ಯ ಪ್ರವೃತ್ತರಾಗಿಲ್ಲ.
ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದು, ಇಂಥ ಸಂದರ್ಭದಲ್ಲಿ ಅಶ್ವಿನಿ ವೈಷ್ಣವ್ ಅವರ ರಾಜೀನಾಮಗೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಹಾನಿಯಾಗಿರುವುದು ನಿಜ ಅದನ್ನು ಸರಿಪಡಿಸಲು ಸಚಿವರು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಕೊಂಚವೂ ಬಿಡುವಿಲ್ಲದಂತೆ ದುಡಿಯುತ್ತಿದ್ದಾರೆ. ಅಪಘಾತದ ಬಗೆಗಿನ ತನಿಖೆ ಪೂರ್ಣಗೊಳ್ಳುವವರೆಗೂ ತಾಳ್ಮೆಯಿಲ್ಲದೆ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಸೂಕ್ತವಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಘಟನೆ ನಡೆದ ಕೇವಲ ಎರಡು ಗಂಟೆಯಲ್ಲಿ ಸ್ಥಳಕ್ಕೆ ಆಗಮಿಸಿದ ವೈಷ್ಣವ್ ಅವರು ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮತ್ತೆ ಫ್ಲೈಟ್ ಹತ್ತದೇ, ರಾತ್ರಿಯೂ ಇದೇ ಸ್ಥಳದಲ್ಲಿ ಉಳಿದು ಜನರ ನೋವಿಗೆ ಸ್ಪಂದಿಸಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ, ಉಳಿದವರನ್ನು ತಮ್ಮ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದರು. ಇಷ್ಟೆಲ್ಲಾ ಮಾಡಿದ ವೈಷ್ಣವ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿರುವುದು ಸೂಕ್ತವಲ್ಲ ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಅಭಿಪ್ರಾಯವಾಗಿದೆ.
https://twitter.com/ANI/status/1665983414468767745?s=20