ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ- ಹುಬ್ಬಳ್ಳಿಗೀಗ ಐಟಿ ಸಿಟಿ ಇಮೇಜ್ !

– ಸಂತೋಷ ಡಿ. ಭಜಂತ್ರಿ

ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಉದ್ಯೋಗ ಸಾಮ್ರಾಟ್ ಎಂದೇ ಖ್ಯಾತಿ ಪಡೆದಿರುವ ಇನ್ಫೋಸಿಸ್ ಸಂಸ್ಥೆಯ ಕ್ಯಾಂಪಸ್ ವಾಣಿಜ್ಯ ನಗರಿಯಲ್ಲಿ ಆಗಸ್ಟ್ 1ರಂದು ಕಾರ್ಯಾರಂಭವಾಗಿದ್ದು, ಹುಬ್ಬಳ್ಳಿಗೆ ಐಟಿ ಸಿಟಿ ಇಮೇಜ್ ಬಂದಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಉದ್ಯೋಗಾಂಕ್ಷಿಗಳಿಗೆ ಹೊಸ ಆಶಾಭಾವನೆ ಮೂಡಿಸಿದೆ.

ಜೂನ್ 22ರಂದು ಇಂದೋರ್, ನಾಗ್ಪುರ, ಕೊಯಂಬತ್ತೂರ ಸೇರಿದಂತೆ ದೇಶ ಆರು ಸ್ಥಳಗಳಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗಳಲ್ಲಿ ಕಾರ್ಯಾರಂಭ ಮಾಡುವುದಾಗಿ ಘೋಷಿಸಿತ್ತು. ಆದರೆ, 5 ವರ್ಷಗಳ ಹಿಂದೆಯೇ ಹುಬ್ಬಳ್ಳಿಯಲ್ಲಿ ನಿರ್ಮಿಸಿದ್ದ ಕ್ಯಾಂಪಸ್ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. 1500 ಉದ್ಯೋಗಿಗಳು ಅವಕಾಶ ವಂಚಿತರಾಗಿದ್ದರು. ಇದರಿಂದ ಉತ್ತರ ಕರ್ನಾಟಕದ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಬೇಸರಗೊಂಡಿದ್ದರು.

ಹೋರಾಟಕ್ಕೆ ಸಂದ ಜಯ:
ಉತ್ತರ ಕರ್ನಾಟಕದ ಐಟಿ ಉದ್ಯಮ ಪಸರಿಸುವ ಕನಸು ಕನಸಾಗಿಯೇ ಉಳಿದ ಹಿನ್ನೆಲೆ ಸಂತೋಷ ನರಗುಂದ ನೇತೃತ್ವದಲ್ಲಿ ವೃತ್ತಿಪರ ಸಂಘಟನೆಯಿಂದ ಜೂನ್ 22ರಂದು ಸ್ಟಾರ್ಟ್ ಇನ್ಫೋಸಿಸ್, ಸಿಎಂಗೆ ಪೋಸ್ಟ್ ಕಾರ್ಡ್ ಅಭಿಯಾನ ಹಾಗೂ ಆನ್ಲೈನ್ ಮೂಲಕ ಸಹಿ ಸಂಗ್ರಹ ಚಳುವಳಿ ಮೂಲಕ ಸರ್ಕಾರಕ್ಕೆ ಹಾಗೂ ಸಂಸ್ಥೆಗೆ ಒತ್ತಾಯಿಸಲಾಗಿತ್ತು. ಉತ್ತರ ಕರ್ನಾಟಕದಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಇದಕ್ಕೆ ಮಣಿದ ಇನ್ಫೋಸಿಸ್ ಸಂಸ್ಥೆ ಕ್ಯಾಂಪಸ್ ಕಾರ್ಯಾರಂಭಕ್ಕೆ ಅಸ್ತು ಅಂದಿದ್ದು, ಹೋರಾಟಕ್ಕೆ ಜಯ ಸಂದಿದೆ.

2018ರಲ್ಲೇ ಸ್ಥಾಪನೆಯಾಗಿದ್ದ ಕ್ಯಾಂಪಸ್:
ಹುಬ್ಬಳ್ಳಿಯಲ್ಲಿ ಐಟಿ ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಇನೋಸಿಸ್ ಸಂಸ್ಥೆ 2012ರಲ್ಲಿ ರಾಜ್ಯ ಸರ್ಕಾರದಿಂದ 50 ಎಕರೆ ಭೂಮಿ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿತ್ತು. ನಂತರ ನಗರದ ವಿಮಾನ ನಿಲ್ದಾಣ ಪಕ್ಕದ ಜಾಗದಲ್ಲಿ ಇನ್ಫೋಸಿಸ್ ಕ್ಯಾಂಪಸ್ ನಿರ್ಮಾಣಕ್ಕೆ 2015ರಲ್ಲಿ ಸರ್ಕಾರ 50 ಎಕರೆ ಭೂಮಿ ಮಂಜೂರು ಮಾಡಿತ್ತು. 350 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಾಣ ಕಾರ್ಯ 2018ರಲ್ಲಿ ಪೂರ್ಣಗೊಂಡಿತ್ತು.

ಅಭಿವೃದ್ಧಿಗೆ ಹೊಸ ರೂಪ:
ಇನ್ಫೋಸಿಸ್ ಕ್ಯಾಂಪಸ್ ಆರಂಭದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಎಂಜನಿಯರಿಂಗ್ ಹಾಗೂ ಬಿಸಿಎ ಇತರೆ ವೃತ್ತಪರ ಪದವಿ ಕೋರ್ಸ್ ಪಡೆದವರಿಗೆ ಉದ್ಯೋಗ ಸಿಗಲಿದೆ. ಇದಲ್ಲದೇ, ಇನ್ನಿತರ ಉದ್ಯೋಗವೂ ಕೂಡ ಸೃಷ್ಟಿಯಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ರೂಪ ಸಿಗಲಿದೆ. ಇತರ ಐಟಿ ಕಂಪನಿಗಳಿಗೂ ದಾರಿ ಮಾಡಿ ಕೊಡಲಿದೆ.

ಒಟ್ಟಾರೆಯಾಗಿ ಉತ್ತರ ಕರ್ನಾಟಕದಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ಉದ್ಯೋಗ ಸಿಗುವುದು ಕಷ್ಟಕರವಾಗಿತ್ತು. ಇನ್ನು ಮುಂದೆ ಐ.ಟಿ. ಕ್ಷೇತ್ರದ ಪ್ರತಿಭಾವಂತರ ಪಲಾಯನ ತಪ್ಪಲಿದೆ. ಸ್ಥಳೀಯರಿಗೂ ಸಾಕಷ್ಟು ಉದ್ಯೋಗಾವಕಾಶ ದೊರೆಯಲಿದೆ. ಸಾಫ್ಟವೇರ್ ರಫ್ತಿನ ವಹಿವಾಟು ನಡೆಸುವ ಸಾಮರ್ಥ್ಯ ಕೂಡ ಹೆಚ್ಚಾಗಲಿದೆ.

ಸಿಎಂಗೆ 10 ಸಾವಿರ ಪತ್ರ!
ಹುಬ್ಬಳ್ಳಿ-ಧಾರವಾಡ ಪಾಲಿಕೆ, ಉದ್ಯಮಿಗಳು, ಎಂಜಿನಿಯರ್ಗಳು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ), ಸಂಘ ಸಂಸ್ಥೆಗಳು, ಗಣ್ಯರು, ಕಾಲೇಜು ವಿದ್ಯಾರ್ಥಿಗಳು ಪತ್ರ ಚಳುವಳಿಗೆ ಬೆಂಬಲಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ 10 ಸಾವಿರ ಪತ್ರಗಳನ್ನು ಬರೆದಿದ್ದರು.

“ಇನೋಸಿಸ್ ಕ್ಯಾಂಪಸ್ ಕಾರ್ಯಾರಂಭವಾಗಿದ್ದು ಸ್ವಾಗತಾರ್ಹ. ಹುಬ್ಬಳ್ಳಿಯಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಉತ್ತರ ಕರ್ನಾಟಕದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.” – ವಿನಯ ಜವಳಿ, ಕರ್ನಾಟಕ ವಾಣಿಜ್ಯೋದಮ ಸಂಸ್ಥೆ, ಹುಬ್ಬಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!