ಅಭಿವೃದ್ಧಿ ಅಂದ್ರೆ ಒಂದೇ ರಾತ್ರಿಯಲ್ಲಿ ನಡೆದುಬಿಡುವ ಮಾಯಾಬಜಾರ್ ಅಲ್ಲ: ಸಚಿವ ಕೆ.ಎನ್.ರಾಜಣ್ಣ

ಹೊಸದಿಗಂತ ಹಾವೇರಿ:

ಅಭಿವೃದ್ಧಿ ಒಂದೇ ರಾತ್ರಿಯಲ್ಲಿ ನಡೆಯುವ ಮಾಯಾ ಬಜಾರ್ ಅಲ್ಲ. ಇದು ಹಂತ ಹಂತವಾಗಿ ನಡೆಯಬೇಕು. ಹಣಕಾಸಿನ ಲಭ್ಯತೆ ಆಧರಿಸಿ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ಹಾವೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಸಮಾಜಗಳನ್ನು ಸಮತೋಲನ ಮಾಡುವ ಬಜೆಟ್ ಇದು, ಎಲ್ಲಾ ಭಾಗಗಳಿಗೆ ಮತ್ತು ಸಮುದಾಯಗಳಿಗೆ ನ್ಯಾಯ ಕಲ್ಪಿಸಿದೆ. ಕೆಳಸ್ಥರದ ಸಮಾಜದ ಜನರ ಆಶೋತ್ತರಗಳಿಗೆ ಬಜೆಟ್‌ನಲ್ಲಿ ಸಿಎಂ ಒತ್ತು ನೀಡಿದ್ದಾರೆ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದು ಸಾಬರ ಬಜೆಟ್ ಎಂಬ ಹೇಳಿಕೆ ಕೆಳಮಟ್ಟದ್ದಾಗಿದ್ದು, ಇಂಥ ಟೀಕೆ ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿಯವರು ವಿರೋಧ ಪಕ್ಷದವರಾಗಿ ಅದರೊಳಗಿನ ನ್ಯೂನ್ಯತೆ ಬಗ್ಗೆ ಪ್ರಸ್ತಾಪ ಮಾಡೋದು ಅವರ ಹಕ್ಕು , ವಿರೋಧ ಪಕ್ಷದವರು ಅದನ್ನ ಮಾಡಬೇಕು ಎಂದರು.
ಎಸ್‌ಸಿಪಿ, ಟಿಎಸ್‌ಪಿ ಕಾಯಿದೆ ನಮ್ಮದೇ, ದೇಶದಲ್ಲಿ ಅದನ್ನ ಸಮರ್ಥವಾಗಿ ಜಾರಿ ಮಾಡಿದವರಲ್ಲಿ ನಾವು ಎರಡನೇಯವರು. ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಆ ಸಮುದಾಯಗಳಿಗೆ ಅಲೋಕೆಶನ್ ಮಾಡಿರೋದು ಬೇರೆ ಕಾರಣಕ್ಕೆ ಉಪಯೋಗ ಮಾಡಲ್ಲ. ಎಸ್‌ಸಿ, ಎಸ್‌ಟಿ ಸಮಾಜಗಳಿಗೆ ಇಟ್ಟ ಹಣ ನಾವು ಬೇರೆ ಕಡೆ ಕೊಟ್ಟಿಲ್ಲ, ಕೊಟ್ಟರೆ ಲೋಪವೆಸಗಿದ ಅಕಾರಿಗಳ ಮೇಲೆ ಕ್ರಮಕೈಗೊಳ್ಳಲು ಕಾಯಿದೆಯಲ್ಲಿ ಅವಕಾಶವಿದೆ, ಹೀಗಾಗಿ ಅದರ ದುರುಪಯೋಗ ಸಾಧ್ಯವಿಲ್ಲ ಎಂದರು.

ಸಾಲರಾಮಯ್ಯ ಎಂಬ ಹೆಚ್‌ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ರಾಜ್ಯಕ್ಕೆ ದೇವರಾಜ ಅರಸರ ನಂತರ ಎಲ್ಲಾ ಸಮಾಜದವರಿಗೆ ನ್ಯಾಯ ದೊರಕಿಸಿಕೊಟ್ಟವರು ಸಿದ್ದರಾಮಯ್ಯ. ಅನ್ನಭಾಗ್ಯ ಬರೀ ಕಾಂಗ್ರೆಸ್‌ಗೆ ಕೊಟ್ಟಿದಾರಾ? ಅನ್ನರಾಮಯ್ಯ ಅಂತ ಜನ ಅವರನ್ನು ಕರೆದರು. ಕೆಲವರು ಅದನ್ನ ಅವರ ಮನೆಯಿಂದ ತಂದು ಕೊಟ್ಟಿಲ್ಲಾ ಅಂತ ಹೇಳಬಹುದು. ಹಿಂದಿನ ಸಿಎಂಗಳೂ ಮನೆಯಿಂದ ತಂದು ಕೊಟ್ಟಿರಲಿಲ್ಲ ಅವರಿಗ್ಯಾಕೆ ಈ ಚಿಂತನೆ ಬರಲಿಲ್ಲ ಅನ್ನಭಾಗ್ಯ ಬರೀ ಕುರುಬರಿಗೆ ಕೊಟ್ಟರಾ? ಕುಮಾರಸ್ವಾಮಿ ಅವರ ಕಾಲದಲ್ಲಿ ಸಾಲ ಮಾಡಿಲ್ವಾ? ಕೇಂದ್ರ ಸರಕಾರದವರು ೧೫ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ಬಡವರು ಹಸಿವಿನಿಂದ ಬಳಲಬಾರದು ಅಂತ ಅನ್ನ ಭಾಗ್ಯ ಕೊಟ್ಟರು ಎಂದರು.

ಕ್ಲೀನ್‌ಚೀಟ್ ಸಮಾಧಾನ ತಂದಿದೆ:

ಸಿಎಂ ಸಿದ್ದರಾಮಯ್ಯಗೆ ಮೂಡಾ ಪ್ರಕರಣದಲ್ಲಿ ರಿಲೀಪ್ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ಯ ಮೇವ ಜಯತೇ ಎಂದು ನಾವೆಲ್ಲಾ ನಂಬಿದ್ದೇವೆ, ಸತ್ಯಕ್ಕೆ ಜಯ ಸಿಕ್ಕಿದೆ. ಅವರು ಹಿಂದೆಯೂ ಸಿಎಂ ಆಗಿದ್ದವರು, ಅಷ್ಟು ಬಾರಿ ವಿಪಕ್ಷನಾಯಕ ಆದವರು ಅವರೇನು ನನಗೆ ಸೈಟ್ ಬೇಕು ಅಂತ ಪತ್ರ ಕೊಟ್ಟಿರಲಿಲ್ಲ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ ಅವರು, ಕಳಂಕವಿಲ್ಲದ ರಾಜಕೀಯ ಜೀವನ ಅವರದು. ಕಳಂಕ ತರಲು ಈ ರೀತಿ ಪ್ರಯತ್ನ ಮಾಡಿದರೂ ಸಹ ಅವರಿಗೆ ರಿಲೀಪ್ ಸಿಕ್ಕಿರೋದು ಸಮಾಧಾನ ತಂದಿದೆ ಎಂದರು.

ಮುಂದಿನ ಬಜೆಟ್ ಅವರೇ ಮಾಡ್ತಾರೆ:

ಮುಂದಿನ ಬಜೆಟ್ ಅವರೇ ಮಾಡ್ತಾರೆ.. ಅದರ ಮುಂದಿನ ಬಜೆಟ್ ಅವರೇ ಮಾಡ್ತಾರೆ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದೆ ಬದಲಾವಣೆ ಇದ್ದರೆ ಹೈಕಮಾಂಡ್‌ನಿಂದ ನಿರ್ಣಯ ಮಾಡುತ್ತೆ. ನಾವೆಲ್ಲಾ ಅವರೇ ಇನ್ನೂ ಇರಬೇಕು ಅಂತ ಆಸೆ ಪಟ್ಟಿದೀವಿ, ಅಂತಿಮವಾಗಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಕೋಟ್ರೇಶಪ್ಪ ಬಸೇಗಣ್ಣಿ, ಎಂ.ಎಂ ಮೈದೂರ, ಶಶಿಧರ ಯಲಿಗಾರ, ಚಂದ್ರಪ್ಪ ಜಾಲಗಾರ ಸೇರಿ ಮತ್ತಿತರರು ಇದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!