Monday, October 13, 2025

ದೇವೇಂದ್ರ ಫಡ್ನವೀಸ್ ‘ಅಸಹಾಯಕ ಸಿಎಂ’: ಉದ್ಧವ್ ಠಾಕ್ರೆ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವೇಂದ್ರ ಫಡ್ನವೀಸ್ ‘ಅಸಹಾಯಕ ಸಿಎಂ’ ಎಂದು ಶಿವಸೇನೆ (UBT) ನಾಯಕ ಉದ್ಧವ್ ಠಾಕ್ರೆ ಶನಿವಾರ ಟೀಕಿಸಿದ್ದಾರೆ.

ಪುಣೆಯಲ್ಲಿ ಮಹಿಳೆಯರು ಮತ್ತು ಸೇನಾ (UBT) ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಠಾಕ್ರೆ ಮಾತನಾಡುತ್ತಾ , ದೇಶದೊಳಗೆ ಗೋಡೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿಯಿಂದ ಸೇನೆಗೆ (ಯುಬಿಟಿ) ಹಿಂದುತ್ವದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳಿದರು.

ಭಾರತ ಸುಂದರವಾದ ದೇಶ. ಇದು ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದೆ. ಆದರೆ ಬಿಜೆಪಿಯವರು ಇಡೀ ವಾತಾವರಣವನ್ನು ಹಾಳುಮಾಡಿದ್ದು, ಅದನ್ನು ನರಕವಾಗಿಸಿದ್ದಾರೆ. ಈ ಜನರು ದೇಶದೊಳಗೆ ಗೋಡೆಗಳನ್ನು ಸೃಷ್ಟಿಸಿದ್ದಾರೆ, ಮತ್ತಷ್ಟು ಅಧಃಪತನವನ್ನು ತಡೆಯಲು ನಾನು ಶ್ರಮಿಸುತ್ತಿದ್ದೇನೆ ಎಂದರು.

ರಾಜ್ಯ ಅಥವಾ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ನರೇಂದ್ರ ಮೋದಿ ಸರ್ಕಾರ ಕಾಶ್ಮೀರ ಮತ್ತು ಮಣಿಪುರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ. ಬಿಜೆಪಿ ದೇಶವನ್ನು ಸರ್ವಾಧಿಕಾರದ ಹಾದಿಯಲ್ಲಿ ಕೊಂಡೊಯ್ಯುತ್ತಿದೆ ಎಂದು ಠಾಕ್ರೆ ಆರೋಪಿಸಿದರು.

ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಸೇರಿದಂತೆ ನಾನು ಯಾರನ್ನೂ ಶತ್ರು ಎಂದು ಪರಿಗಣಿಸುವುದಿಲ್ಲ. ಆದರೆ ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ(ಬಿಜೆಪಿ ನೇತೃತ್ವದ ಮಹಾಯುತಿ) ಬಹುಮತ ಹೊಂದಿದ್ದರೂ ಮುಖ್ಯಮಂತ್ರಿ ಅಸಹಾಯಕತೆ ತೋರುತ್ತಿದ್ದಾರೆ. ಹಲವಾರು ಭ್ರಷ್ಟಾಚಾರದ ನಿದರ್ಶನಗಳ ಹೊರತಾಗಿಯೂ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಅಸಹಾಯಕರಾಗಿದ್ದಾರೆ. ಭಾರೀ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಸಹಾಯ ಮಾಡಲು ಫಡ್ನವಿಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

error: Content is protected !!