ಮಹಾರಾಷ್ಟ್ರದಲ್ಲೂ ಅರಳಲಿದೆ ಕಮಲ: ನಾಳೆ ಫಡ್ನವೀಸ್‌ ಪ್ರಮಾಣ ವಚನ ಸ್ವೀಕಾರ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಬಂಡಾಯ ಶಾಸಕರ ನಾಯಕ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರ್ಧಾರದ ಮೇಲೆ ‘ಮಹಾ’ ರಾಜಕೀಯ ನಿಂತಿದೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಶಿವಸೇನೆ ಬಂಡಾಯ ಶಾಸಕರು ಮತ್ತು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಾಗಿದ್ದು, ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಮರು ಆಯ್ಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜುಲೈ 1ರ ಶುಕ್ರವಾರದಂದು ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ‌

ಉದ್ಧವ್ ರಾಜೀನಾಮೆ ನೀಡಿದ ತಕ್ಷಣವೇ ಮುಂಬೈನ ತಾಜ್ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಪಕ್ಷದ ಸಭೆ ನಡೆದಿದ್ದು, ಮುಂದಿನ ಕಾರ್ಯತಂತ್ರವನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತೊಂದೆಡೆ, ಬಿಜೆಪಿ ಶಾಸಕರು ಎಲ್ಲರೂ ಸಂಪರ್ಕದಲ್ಲಿರುವಂತೆ ಆದೇಶಿಸಿದರು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಮುಂದಿನ ಕ್ರಮದ ಬಗ್ಗೆ ಇಂದು ಸ್ಪಷ್ಟನೆ ಬರುವ ಸಾಧ್ಯತೆ ಇದೆ. ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂಬೈನಲ್ಲಿರುವ ಫಡ್ನವೀಸ್ ನಿವಾಸದಲ್ಲಿ ಬಿಜೆಪಿ ಶಾಸಕರು ಸೇರಿದಂತೆ ಹಲವು ಪಕ್ಷದ ಮುಖಂಡರು ಪರಸ್ಪರ ಸಿಹಿ ತಿನಿಸಿಕೊಂಡು ಶುಭಾಶಯ ಕೋರಿದರು.  ಫಡ್ನವೀಸ್ ಮತ್ತು ಬಿಜೆಪಿ ನಾಯಕತ್ವವು ಶಿಂಧೆ ಅವರನ್ನು ಭೇಟಿಯಾಗಿ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ. ನಂತರ ರಾಜ್ಯಪಾಲರ ಬಳಿ ತೆರಳಿ ಒಟ್ಟಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!