ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಾರು ಏನೇ ಎಷ್ಟೇ ಸುಳ್ಳಿನ ಮಾಹಿತಿ ಹರಡಿದರೂ ಕೋಟ್ಯಂತರ ಜನರು ಕುಂಭಮೇಳದಲ್ಲಿ ಭಾಗವಹಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ.
ಮಹಾ ಕುಂಭಮೇಳ ಯಶಸ್ವಿಯಾದ ಬೆನ್ನಲ್ಲೇ ಇಂದು ಯೋಗಿ ಪ್ರಯಾಗ್‌ರಾಜ್‌ಗೆ ಆಗಮಿಸಿದ ಅವರು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಜಿ, ಮಧ್ಯಾಹ್ನ ಭೋಜನ ಮಾಡಿದರು.
ಬಳಿಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಉದ್ದೇಶಿಸಿ ಮಾತನಾಡಿದ ಅವರು, ತಪ್ಪು ಮಾಹಿತಿಗೆ ನಾವು ಬಲಿಯಾಗುವುದಿಲ್ಲ ಮತ್ತು ಸನಾತನದ ಧ್ವಜ ಎಂದಿಗೂ ಕೆಳಗೆ ಇಳಿಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ಕೋಟ್ಯಂತರ ಭಕ್ತರು ವಿರೋಧಿಸುವವರಿಗೆ ರವಾನಿಸಿದ್ದಾರೆ ಎಂದು ಹೇಳಿದರು.
ಇಲ್ಲಿ 20-25 ಲಕ್ಷ ಜನಸಂಖ್ಯೆ ಇದೆ. ಆದ್ರೆ ದೀಢಿರ್ ಕೋಟ್ಯಂತರ ಜನ ಬಂದಾಗ ಪರಿಸ್ಥಿತಿ ಏನಾಗಬಹುದು ಎನ್ನುವುದು ನನಗೆ ತಿಳಿದಿದೆ. ಇಲ್ಲಿಯ ಜನತೆ ಕಳೆದ ಎರಡು ತಿಂಗಳುಗಳಿಂದ ಈ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮವಾಗಿ ಸ್ವೀಕರಿಸಿದ ಪ್ರಯಾಗ್‌ರಾಜ್ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ಸುಮಾರು 66.30 ಕೋಟಿ ಭಕ್ತರು ಭಾಗವಹಿಸಿದ ಬೃಹತ್ ಕಾರ್ಯಕ್ರಮ ಜಗತ್ತಿನ ಎಲ್ಲಿಯೂ ನಡೆದಿಲ್ಲ. ಅಪಹರಣ, ಲೂಟಿ ಅಥವಾ ಅಂತಹ ಯಾವುದೇ ಘಟನೆ ನಡೆದಿಲ್ಲ. ಪ್ರತಿಪಕ್ಷಗಳು ಬೈನಾಕ್ಯುಲರ್ ಮತ್ತು ಸೂಕ್ಷ್ಮದರ್ಶಕವನ್ನು ಬಳಸಿ ಹುಡುಕಿದರೂ ಅವರಿಗೆ ಸಿಗಲಿಲ್ಲ ಎಂದರು.
ಈ ಕಾರ್ಯಕ್ರಮ ಮಾಡಿದ್ದನ್ನು ಸಹಿಸದ ಪ್ರತಿಪಕ್ಷಗಳು ಸುಳ್ಳು ಮಾಹಿತಿಯನ್ನು ಹರಡಿದವು. ಮೌನಿ ಅಮವಾಸ್ಯೆಯಂದು 8 ಕೋಟಿ ಭಕ್ತರು ಸ್ನಾನ ಮಾಡಿದ್ದರು. ಪ್ರತಿಪಕ್ಷಗಳು ಕಠ್ಮಂಡುವಿನ ವೀಡಿಯೋ ಬಳಸಿಕೊಂಡು ಮತ್ತು ಅದನ್ನು ಪ್ರಯಾಗ್‌ರಾಜ್‌ನಿಂದ ಎಂದು ಬಿಂಬಿಸುವ ಮೂಲಕ ತಪ್ಪು ಮಾಹಿತಿಯನ್ನು ಹರಡಿದ್ದರು. ಕೆಲವು ವೀಡಿಯೊಗಳನ್ನು ತೋರಿಸುವ ಮೂಲಕ ಪ್ರಯಾಗ್‌ರಾಜ್ ಅನ್ನು ನಿಂದಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಅಂದು ಮೌನಿ ಅಮವಾಸ್ಯೆ ರಾತ್ರಿ ದು:ಖಕರ ಘಟನೆ ನಡೆಯಿತು. ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ಬಗ್ಗೆ ನಮಗೆ ಸಹಾನುಭೂತಿಯಿದೆ. ಪ್ರತಿ ಪಕ್ಷಗಳು ಈ ವಿಚಾರವನ್ನು ದೊಡ್ಡದು ಮಾಡಿದ್ದವು. ಆದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಅವರಿಗೆ ಉತ್ತರ ನೀಡಿದರು ಎಂದರು.
ಇದೇ ವೇಳೆ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ 10,000 ರೂ. ಬೋನಸ್ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಏಪ್ರಿಲ್‌ನಿಂದ ನೈರ್ಮಲ್ಯ ಕಾರ್ಮಿಕರಿಗೆ ಕನಿಷ್ಠ ವೇತನ 16,000 ರೂ.ಗಳನ್ನು ಒದಗಿಸಲಾಗುವುದು. ಎಲ್ಲಾ ಆರೋಗ್ಯ ಕಾರ್ಯಕರ್ತರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಗೆ ಲಿಂಕ್ ಮಾಡಲಾಗುವುದು ಎಂದು ಈ ವೇಳೆ ಘೋಷಣೆ ಮಾಡಿದರು.