ಭಕ್ತರೇ ಗಮನಿಸಿ.. ತಿರುಪತಿ ಮಾದರಿ ಇನ್ಮುಂದೆ ಧರ್ಮಸ್ಥಳದಲ್ಲೂ ‘ಕ್ಯೂ ಸಿಸ್ಟಂʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ತಿರುಪತಿ ಮಾದರಿಯಲ್ಲಿ ಕ್ಯೂ ವ್ಯವಸ್ಥೆ ಜಾರಿಗೆ ತರಲಾಗಿದ್ದು, ನೂತನ ಸಂಕಿರ್ಣವನ್ನು ಜನವರಿ.7ರಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಉದ್ಘಾಟಿಸಲಿದ್ದಾರೆ.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭಾಗವಹಿಸುವರು.

2.75 ಲಕ್ಷ ಚದರ ಅಡಿ ವಿಸ್ತೀರ್ಣದ ಸಂಕೀರ್ಣ ಮೂರು ಅಂತಸ್ತು ಹೊಂದಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 16 ವಿಶಾಲ ಸಭಾಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಪ್ರತಿ ಸಭಾಭವನದಲ್ಲಿ 600-800 ಮಂದಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿದೆ. ಇದರರ್ಥ, ಸರದಿಯಲ್ಲಿ ಜನರು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ವಿಶಾಲವಾದ ಭವನದಲ್ಲಿ ಕುರ್ಚಿಗಳ ಮೇಲೆ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು.

ಭವನಗಳಲ್ಲಿ ಮಕ್ಕಳ ಆರೈಕೆ ಕೊಠಡಿ, ಶೌಚಗೃಹ, ಕ್ಯಾಂಟೀನ್‌ ಸೌಲಭ್ಯವೂ ಇದೆ. ಅಲ್ಲಲ್ಲಿ ಸೂಚನಾ ಫಲಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆ ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಅಳವಡಿಸಲಾಗಿದೆ. ತುರ್ತು ಪ್ರಕಟಣೆಗಳು ಮತ್ತು ಸುರಕ್ಷತಾ ಸೂಚನೆಗಳನ್ನು ತಿಳಿಸಲು ಭವನದಲ್ಲಿ 263 ಸ್ಪೀಕರ್‌ಗಳು ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ, 650 ಕಿಲೋವ್ಯಾಟ್‌ಗಳ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಇದು ವಿದ್ಯುತ್ ಉತ್ಪಾದಿಸುತ್ತದೆ. ಅಲ್ಲದೆ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!