ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿ ಗುರುವಾರ ತೆರೆದಿದ್ದು, ಇಂದಿನಿಂದ ಸಾರ್ವಜನಿಕರು ಶಕ್ತಿದೇವತೆಯ ದರ್ಶನ ಪಡೆಯಬಹುದಾಗಿದೆ.
ಗರ್ಭಗುಡಿ ಬಾಗಿಲು ತೆರೆಯುವ ವೇಳೆಯಲ್ಲಿ ತೆನೆ ಇರುವ ಬಾಳೆ ಕಡಿಯುವ ಮೂಲಕ ಗರ್ಭಗುಡಿ ಬಾಗಿಲು ತೆರೆಯುವ ಸೂಚನೆ ಸಿಗುತ್ತಲೇ ಬಾಗಿಲು ತೆರೆದ ಅರ್ಚಕರು ಗರ್ಭಗುಡಿಯೊಳಗೆ ಕಳೆದ ವರ್ಷ ಹಚ್ಚಿಟ್ಟ ದೀಪ ಬೆಳಗುತ್ತಿರುವುದು ಹಾಗೂ ಬಾಡದ ಹೂವನ್ನು ದರುಶನ ಮಾಡಿದರು.
ನೆರೆದಿದ್ದ ಗಣ್ಯರು, ಸಹಸ್ರ ಸಹಸ್ರ ಭಕ್ತರು ದೇವಿಯ ವಿಶ್ವರೂಪ ದರ್ಶನ ಮಾಡುವ ಮೂಲಕ ಪುನೀತರಾಗಿದ್ದು, 11 ದಿನಗಳು ನಡೆಯುವ ಸಂಭ್ರಮದ ಹಾಸನಾಂಬೆ ಉತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಲಿದ್ದಾರೆ. ಇಂದು ಕೂಡ ಬೆಳ್ಳಂಬೆಳಗ್ಗೆಯೇ ದೇವಿಯ ದರುಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಕಾದಿದ್ದಾರೆ.
ಗರ್ಭಗುಡಿ ಬಾಗಿಲನ್ನು ತೆರೆಯುತ್ತಿದ್ದಂತೆಯೇ ಭಕ್ತರು ಹಾಗೂ ಸಾರ್ವಜನಿಕರು, ಹಾಸನಾಂಬೆಗೆ ಉಘೇ ಉಘೇ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿ ತಂದು ಗರ್ಭಗುಡಿ ಬಾಗಿಲ ಎದುರು ವಿಶೇಷ ಪೂಜೆ ನೆರವೇರಿಸಿದ ಅರ್ಚಕ ವೃಂದ, ನಂತರ ನಿಗದಿತ ಮುಹೂರ್ತದ ಸಮಯದಲ್ಲಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಿದರು.
ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇಲ್ಲ ಎಂದು ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಹೇಳಿತ್ತಾದರೂ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮೂಹ ದೇವಾಲಯ ಆವರಣಕ್ಕೆ ಬಂದಿತ್ತು. ನೂಕು ನುಗ್ಗಲಿನ ನಡುವೆಯೇ ದೇವಿ ದರ್ಶನಕ್ಕೆ ಲಭಿಸಿದ ಅವಕಾಶವನ್ನ ಬಳಸಿಕೊಂಡ ಸಹಸ್ರಾರು ಜನರು ಮೊದಲ ದಿನವೇ ಆರದ ದೀಪ ನೋಡಿ ಪುನೀತರಾದರು.