ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಟಗಾರರನ್ನು ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ದೆಹಲಿಗೆ ಕರೆ ತಂದ ಏರ್ ಇಂಡಿಯಾಗೆ ಸಂಕಷ್ಟವೊಂದು ಎದುರಾಗಿದ್ದು, ನೆವಾರ್ಕ್‌ನಿಂದ ದೆಹಲಿ ನಡುವೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾದ ಸಾಮಾನ್ಯ ಪ್ಯಾಸೆಂಜರ್ ವಿಮಾನವನ್ನು ಜುಲೈ 2ರಂದು ರದ್ದುಗೊಳಿಸಿ, ಭಾರತದ ಕ್ರಿಕೆಟ್ ತಂಡವನ್ನು ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಬಾರ್ಬಡೋಸ್‌ಗೆ ಡೈವರ್ಟ್ ಮಾಡಿದ ಕ್ರಮಕ್ಕೆ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(DGCA)ವು ಏರ್ ಇಂಡಿಯಾದಿಂದ ವರದಿ ಕೇಳಿದೆ.
ಟಿ20 ವಿಶ್ವಕಪ್ ಟೂರ್ನಿ ಮುಗಿದ ಮರು ದಿನವೇ ವೆಸ್ಟ್ ಇಂಡೀಸ್ನಲ್ಲಿ ಬೆರಿಲ್ ಚಂಡಮಾರುತ ಉಂಟಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್‌ನಲ್ಲೇ ನಾಲ್ಕು ದಿನಗಳ ಕಾಲ ಸಿಲುಕಿಕೊಂಡಿದ್ದರು. ಹವಾಮಾನವು ಸುಧಾರಿಸಿದ ನಂತರ, ವಿಶ್ವ ಚಾಂಪಿಯನ್‌ಗಳನ್ನು ಮರಳಿ ಮನೆಗೆ ಕರೆತರಲು ಬಿಸಿಸಿಐ ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನವನ್ನು ಬಾರ್ಬಡೋಸ್‌ಗೆ ಕಳುಹಿಸಲಾಗಿತ್ತು. ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಇಂದು(ಗುರುವಾರ) ಬೆಳಗ್ಗೆ ಭಾರತಕ್ಕೆ ಬಂದಿಳಿದೆ. ಇದೀಗ ಪ್ಯಾಸೆಂಜರ್ ವಿಮಾನವನ್ನು ರದ್ದುಗೊಳಿಸಿದ ಕ್ರಮಕ್ಕೆ ಉತ್ತರ ನೀಡುವಂತೆ ಏರ್ ಇಂಡಿಯಾಗೆ ಡಿಜಿಸಿಎ ಆದೇಶಿಸಿದೆ.
ಡಿಜಿಸಿಎ 2017ರ ನಿಯಮಗಳ ಪ್ರಕಾರ, ನಿಗದಿತ ವಿಮಾನ ಸೇವೆಗಳನ್ನು ಕೈಬಿಟ್ಟು ನಿಗದಿತವಲ್ಲದ ವಿಮಾನ ಸೇವೆಗಳನ್ನು ಬಳಸುವಂತಿಲ್ಲ ಎಂದು ಹೇಳಿತ್ತು. ಈ ನಿಯಮನ್ನು ಏರ್ ಇಂಡಿಯಾ ಉಲ್ಲಂಘಿಸಿದೆ ಎಂದು ಡಿಜಿಸಿಎ ಹೇಳಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವಿಮಾನ ರದ್ದುಗೊಂಡ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಲಾಗಿತ್ತು. ಅವರಿಗೆ ನ್ಯೂಯಾರ್ಕ್ ತನಕ ರಸ್ತೆ ಮೂಲಕ ಸಾಗಲು ಅಥವಾ ವಿಮಾನದಲ್ಲಿ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ನಂತರ ನ್ಯೂಯಾರ್ಕ್‌ನಿಂದ ದಿಲ್ಲಿಗೆ ತೆರಳಲು ಬೇರೆ ವಿಮಾನ ಸೇವೆ ಒದಗಿಸಲಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.